ಕರ್ನಾಟಕ

karnataka

ETV Bharat / state

ಯುವ ಕಾಂಗ್ರೆಸ್ ಉಪಾಧ್ಯಕ್ಷೆಗೆ ನಲ​ಪಾಡ್ ಬೆದರಿಕೆ ಆರೋಪ: ಭವ್ಯಾ ಪರ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಬ್ಯಾಟಿಂಗ್​ - Bustle in Youth Congress

ತನಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್​ ರಾಜ್ಯ ಉಪಾಧ್ಯಕ್ಷೆ ಭವ್ಯಾ ಅವರು ಮೊಹಮ್ಮದ್​ ನಲ​ಪಾಡ್​ ವಿರುದ್ಧ ದೂರು ನೀಡಿದ್ದಾರೆ. ಭವ್ಯಾಗೆ ಬೆದರಿಕೆ ಹಾಕಿದ್ದಕ್ಕೆ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಧ್ವನಿ ಎತ್ತಿದ್ದಾರೆ.

 Nalapad threatens to vice president of Youth Congress
Nalapad threatens to vice president of Youth Congress

By

Published : Apr 22, 2021, 6:40 PM IST

Updated : Apr 22, 2021, 7:34 PM IST

ಬೆಂಗಳೂರು: ಯುವ ಕಾಂಗ್ರೆಸ್‍ನಲ್ಲಿ ಗದ್ದಲ ಉಂಟಾಗಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಕೋವಿಡ್ ವಾರ್ ರೂಂ ಸ್ಥಾಪನೆ ವಿರೋಧಿಸಿ ಎಸ್‍ಸಿ ಸಮುದಾಯದ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾ ಅವರಿಗೆ, ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ಕೊಡಲಾಗಿದೆ. ಇದು ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರು ಅದರಲ್ಲೂ ಮುಖ್ಯವಾಗಿ ಪರಿಶಿಷ್ಟ ಜಾತಿಯವರು ಸುರಕ್ಷಿತರಲ್ಲವೇ ಎಂಬ ಪ್ರಶ್ನೆಗೆ ಕಾರಣವಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಟೀಕಿಸಿದ್ದಾರೆ.

ಬೆದರಿಕೆಯ ಹಿನ್ನೆಲೆ ಭವ್ಯಾ ಅವರು ರಕ್ಷಣೆ ಕೋರಿ ನಲಪಾಡ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬುಧವಾರ ಸಂಜೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರೋ ಕಾಂಗ್ರೆಸ್ ಭವನದಲ್ಲಿ ಕೋವಿಡ್ ವಾರ್ ರೂಂ ನಿರ್ಮಾಣದ ಕೆಲಸದ ವೇಳೆ ಅಡ್ಡಿಪಡಿಸಿ ನಲಪಾಡ್, ಭವ್ಯಾ ಅವರಿಗೆ ಧಮ್ಕಿ ಹಾಕಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಬೆದರಿಕೆಯು ಕಾಂಗ್ರೆಸ್ ಪಕ್ಷದಲ್ಲಿನ ಮುಸುಕಿನ ಗುದ್ದಾಟಕ್ಕೆ ಹಿಡಿದ ಕೈಗನ್ನಡಿ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ನಲ​ಪಾಡ್ ಹಾಗೂ ಬೆಂಬಲಿಗರ ಬೆದರಿಕೆ ಹಾಗೂ ಗಲಾಟೆ ಹಿನ್ನೆಲೆ ಭವ್ಯಾ ಅವರು ಹೈಗ್ರೌಂಡ್ಸ್ ಠಾಣೆ ಮೆಟ್ಟಿಲೇರಿದ್ದಾರೆ. ದೂರಿನಲ್ಲಿ ನಲಪಾಡ್ ಬೆದರಿಕೆ ಬಗ್ಗೆ ಸಂಪೂರ್ಣ ವಿವರ ಹಾಗೂ ಇತಿಹಾಸ ಉಲ್ಲೇಖಿಸಿದ್ದಾರೆ ಎಂಬ ವಿವರ ಲಭಿಸಿದೆ. ಶಾಸಕ ಹಾರಿಸ್ ಅವರ ಮಗ ಮೊಹಮ್ಮದ್ ನಲ​ಪಾಡ್, ಭಾಸ್ಕರ್, ಗೋವರ್ಧನ್, ಆಗಸ್ಟಿನ್ ಹಾಗೂ ಇತರ 15ಕ್ಕೂ ಹೆಚ್ಚು ಜನರ ವಿರುದ್ಧ ಭವ್ಯಾ ದೂರು ನೀಡಿದ್ದಾರೆ.

ಯುವ ಕಾಂಗ್ರೆಸ್ ಕಚೇರಿಗೆ ಏಕಾಏಕಿಯಾಗಿ ಬಂದು ತನ್ನನ್ನು ಗುರಿಯಾಗಿಸಿಕೊಂಡು ನಿಂದಿಸಿ, ಹೊಡೆಯುವ ಹಾಗೆ ಕೈ ತೋರಿಸಿದ್ದಾರೆ. ನನಗೆ ಹಾಗೂ ನನ್ನ ಸಹೋದ್ಯೋಗಿಗಳಿಗೆ ಏಕವಚನದಲ್ಲಿ ನಿಂದಿಸಿದ್ದಾರೆ. ಆರ್ಧ ಗಂಟೆಯ ನಂತರ ಮತ್ತೆ 5 ಜನರು ಬಂದು ನಮ್ಮ ಬಾಸ್ ನಲ​ಪಾಡ್‍ ಅವರ ತಂಟೆಗೆ ಬಂದರೆ ನಾವು ನಿಮ್ಮನ್ನು ಕೆಲಸ ಮಾಡಲು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ ಎಂದು ಭವ್ಯಾ ಆರೋಪ ಮಾಡಿದ್ದಾರೆ ಎಂಬ ಮಾಹಿತಿ ಕಳವಳ ಹುಟ್ಟಿಸುವಂತಿದೆ ಎಂದು ಗೀತಾ ಆತಂಕ ವ್ಯಕ್ತಪಡಿಸಿದ್ದಾರೆ.

ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆ ವೇಳೆ ತಮ್ಮ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿರುವ ಬಗ್ಗೆಯೂ ಭವ್ಯಾ ದೂರಿದ್ದಾರೆ. ಬಸವ ಕಲ್ಯಾಣದಲ್ಲಿ ನಡೆದ ಚುನಾವಣಾ ಪ್ರಚಾರಕ್ಕೆ ಹೋದಾಗ ಸಹ ತೊಂದರೆ ಕೊಟ್ಟಿದ್ದಾರೆ. ನಲಪಾಡ್ ಹಾಗೂ ಬೆಂಬಲಿಗರು ನನ್ನ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ದೆಹಲಿಯಲ್ಲೂ ಕೂಡ ನಲಪಾಡ್ ನನ್ನ ಮೇಲೆ ಕೂಗಾಡಿ, ಕೆಲ ಶಾಸಕರು ಹಾಗೂ ಕೆಪಿಸಿಸಿ ಕಾರ್ಯದರ್ಶಿಗಳಿಗೇ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಮೂರು ಪುಟಗಳ ಸುದೀರ್ಘ ದೂರಿನಲ್ಲಿ ಭವ್ಯಾ ಉಲ್ಲೇಖಿಸಿದ ಮಾಹಿತಿ ನಮಗೆ ಸಿಕ್ಕಿದೆ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ಗುದ್ದಾಟಕ್ಕೆ ಹಿಡಿದ ಕೈಗನ್ನಡಿ ಎಂದು ಬಿಜೆಪಿ ಮಹಿಳಾ ಯುವ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ಟೀಕಿಸಿದ್ದಾರೆ.

Last Updated : Apr 22, 2021, 7:34 PM IST

For All Latest Updates

ABOUT THE AUTHOR

...view details