ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಕುರಿತಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸದುದ್ದೇಶದ, ರಚನಾತ್ಮಕ ಟೀಕೆಯನ್ನು ಸಹಿಸಿಕೊಳ್ಳಲಾಗದಷ್ಟು ಅಸಹಿಷ್ಣು ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಟೀಕೆ, ಉದ್ಧಟತನ ಅವರ ಕೀಳುಮಟ್ಟದ ಮನಸ್ಥಿತಿಯನ್ನು ಬಿಂಬಿಸುತ್ತದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಸಾವಿನಿಂದ ಹಿಡಿದು ರೋಗದವರೆಗೆ ಎಲ್ಲದರಲ್ಲಿಯೂ ರಾಜಕೀಯ ಲಾಭದ ಲೆಕ್ಕಾಚಾರ ಮಾಡುತ್ತಿರುವ ಬಿಜೆಪಿ ನಾಯಕರ ದುರಾಲೋಚನೆಯನ್ನು ಸಹಿಸಿಕೊಂಡರೆ ಜನತೆಗೆ ನಾವು ದ್ರೋಹ ಬಗೆದಂತಾಗುತ್ತದೆ. ನಾವು ಪ್ರಶ್ನೆ ಮಾಡುತ್ತೇವೆ, ನೀವು ಉತ್ತರಿಸಬೇಕು. ದೇಶದ ಮೊದಲ ಕೊರೊನಾ ವೈರಸ್ ಪೀಡಿತ ವ್ಯಕ್ತಿ ಪತ್ತೆಯಾಗಿರುವುದು ಜನವರಿ 30ರಂದು. ಈ ಬಗ್ಗೆ ಎಚ್ಚರದಿಂದ ಇರಬೇಕು, ನಿರ್ಲಕ್ಷ್ಯ ಮಾಡಬಾರದೆಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿರುವುದು ಫೆ. 12ರಂದು. ಇದರಲ್ಲಿ ಯಾವ ಕೀಳು ರಾಜಕೀಯ ಇತ್ತು ನಡ್ಡಾ ಅವರೇ? ಎಂದು ಪ್ರಶ್ನಿಸಿದ್ದಾರೆ.
ಟ್ರಂಪ್ ಬಂದಾಗ ಜನ ಸೇರಿಸಿದ್ದು ಯಾಕೆ?: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದಾಗ ಆ ದೇಶದಲ್ಲಿ 80 ಜನರಿಗೆ ಕೊರೊನಾ ಸೋಂಕು ತಗಲಿತ್ತು. ಭಾರತದಲ್ಲಿ 20 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಹೀಗಿದ್ದರೂ ಗುಜರಾತ್‌ನಲ್ಲಿ ಲಕ್ಷ ಲಕ್ಷ ಜನರನ್ನು ಸೇರಿಸಿ ಜಾತ್ರೆ ಮಾಡಿದವರು ಯಾರು? ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ? ಮಾ. 16ರವರೆಗೆ ಆರು ದೇಶಗಳನ್ನು ಹೊರತುಪಡಿಸಿ ಉಳಿದೆಲ್ಲಾ ದೇಶಗಳ ವಿಮಾನ ಪ್ರಯಾಣಿಕರನ್ನು ಪರೀಕ್ಷೆ ಮಾಡದೆ ದೇಶದೊಳಗೆ ಬಿಟ್ಟವರು ಯಾರು? ಹೀಗೆ ಬಂದಿದ್ದ ಎರಡು ಲಕ್ಷ ಪ್ರಯಾಣಿಕರಲ್ಲಿ ಪರೀಕ್ಷೆಗೊಳಗಾದವರು ಎಷ್ಟು ಮಂದಿ? ಇದು ನಿಮ್ಮ ಸಿದ್ಧತೆಯಾ ನಡ್ಡಾ ಅವರೇ? ಎಂದು ಪ್ರಶ್ನಿಸಿದ್ದಾರೆ.