ಬೆಂಗಳೂರು:ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ನಗರದಲ್ಲಿ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯ ನಿಮಿತ್ತ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಗರದಲ್ಲಿ ಅಭಿವೃದ್ದಿ ಹೆಸರಿನಲ್ಲಿ ಒಂದೊಂದೇ ಕೆರೆ ನುಂಗಲಾಗುತ್ತಿದೆ. ಒಂದೆಡೆ ಕೆರೆಗಳನ್ನು ಬಡಿದು ಬಾಯಿಗೆ ಹಾಕಿಕೊಳ್ಳುತ್ತಿದ್ದೇವೆ. ಇನ್ನೊಂದೆಡೆ ಮೇಕೆದಾಟು, ಎತ್ತಿನಹೊಳೆ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಹೀಗೆ ಆದಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರು ಮಹಾನಗರವು ಕುಡಿಯುವ ನೀರಿನ ಸಮಸ್ಯ ಎದುರಿಸಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಬಿಳೇಕಹಳ್ಳಿ ಕರೆಯನ್ನು ಮುಚ್ಚಿದರು. ಬೇಕಾದ ಹಾಗೆ ಬೇಲಿ ಹಾಕಿಕೊಂಡು ಜಲಸಂಪನ್ಮೂಲಗಳನ್ನು ಹಾಳು ಮಾಡಿದರು. ಬೆಂಗಳೂರು ಕೆರೆಗಳನ್ನು ಉಳಿಸುವುದು ಕೆಂಪೇಗೌಡರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಅವರು ಪ್ರತಿಪಾದಿಸಿದರು. ನಾನು ಮುಖ್ಯಮಂತ್ರಿ ಆಗಿದ್ದಾಗ ನಗರದ ಕೆರೆಗಳನ್ನು ಕಬಳಿಕೆ ಮಾಡಿರುವುದನ್ನು ತನಿಖೆ ಮಾಡಲು ಸದನ ಸಮಿತಿ ರಚನೆ ಮಾಡಿದೆ. ನಾನು ಸಿಎಂ ಆಗಿದ್ದಾಗ ಜೆಪಿ ನಗರದ ಕೆಲ ಬಡಾವಣೆಗಳಿಗೆ ಮಳೆ ನೀರು ನುಗ್ಗುತ್ತಿತ್ತು. ಆ ನೀರು ಮನೆಗಳಿಗೆ ನುಗ್ಗದೆ ಕೆರೆಗೆ ಹರಿದುಹೋಗುವ ರೀತಿ ವ್ಯವಸ್ಥೆ ಮಾಡಿದೆ. ಕೆಲ ದಿಚನಗಳ ಹಿಂದೆ ಭಾರೀ ಮಳೆಯಾದರೂ ಪುಟ್ಟೇನಹಳ್ಳಿ ಭಾಗದ ಮನೆಗಳಿಗೆ ನೀರು ನುಗ್ಗಿಲ್ಲ. ಆಗ ಅಲ್ಲಿಗೆ ಭೇಟಿ ನೀಡಿದಾಗ ಹೆಲಿಕಾಪ್ಟರ್ʼನಲ್ಲಿ ನನ್ನ ಮೇಲೆ ಪುಷ್ಷಾರ್ಚನೆ ಮಾಡಿದರು. ಆದರೆ, ಚುನಾವಣೆ ಬಂದಾಗ ನನ್ನನ್ನು ಮರೆತೇ ಬಿಟ್ಟರು ಎಂದು ಮಾಜಿ ಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದರು.
ಒಂದೆಡೆ ಕೆರೆಗಳನ್ನು ಬಡಿದು ಬಾಯಿಗೆ ಹಾಕಿಕೊಳ್ಳುತ್ತಿದ್ದೇವೆ. ಇನ್ನೊಂದೆಡೆ ಮೇಕೆದಾಟು, ಎತ್ತಿನಹೊಳೆ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಇಲ್ಲಿ ಕೆರೆ ಉಳಿಸಿಕೊಂಡಿಲ್ಲ, ಉಳಿಸಿಕೊಳ್ಳುವ ಬಗ್ಗೆ ಮಾತನಾಡುವುದೂ ಇಲ್ಲ. ಕೊನೆಪಕ್ಷ ಈಗ ಉಳಿದಿರುವ ಕೆರೆಗಳನ್ನಾದರೂ ರಕ್ಷಣೆ ಮಾಡಿದ್ದೀವಾ? ಅದೂ ಇಲ್ಲ. ಮುಂದಿನ ದಿನಗಳಲ್ಲಿ ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಏನು? ಒಂದು ಕಡೆ ಬೆಳೆಯುತ್ತಿದ್ದೇವೆ, ಮತ್ತೊಂದೆಡೆ ಹೊಸ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಗುಡುಗಿದರು.
ಕೆಂಪೇಗೌಡರ ಜಯಂತಿ ಇಡೀ ಕರ್ನಾಟಕದಲ್ಲಿ ನಡೆಯಬೇಕು: ಬೆಂಗಳೂರು ನಗರ ಇಡೀ ವಿಶ್ವಕ್ಕೆ ಪರಿಚಯ ಇರುವ ನಗರಿ. ಇದಕ್ಕೆ ಕಾರಣ ಕೆಂಪೇಗೌಡರು. ಕೆಂಪೇಗೌಡರ ಜಯಂತಿ ಇಡೀ ಕರ್ನಾಟಕದಲ್ಲಿ ನಡೆಯಬೇಕು. ಆ ಮೂಲಕ ಅವರ ಆಶಯಗಳನ್ನು ಸಾಕಾರಗೊಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಅವರು ಹೇಳಿದರು.