ಬೆಂಗಳೂರು:ಬಡವರ ಅನುಕೂಲಕ್ಕೆ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಆರೋಗ್ಯ ಕಾರ್ಡ್ ಎಲ್ಲಿಯೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಶಾಸಕ ಎನ್.ಎ.ಹ್ಯಾರಿಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಎಲ್ಲಿಯೂ ಆಯುಷ್ಮಾನ್ ಆರೋಗ್ಯ ಕಾರ್ಡ್ ವರ್ಕ್ ಆಗ್ತಿಲ್ಲ: ಶಾಸಕ ಹ್ಯಾರಿಸ್ ಆಕ್ರೋಶ - ಆಯುಷ್ಮಾನ್ ಆರೋಗ್ಯ ಕಾರ್ಡ್ ಲೆಟೆಸ್ಟ್ ನ್ಯೂಸ್
ಬಡವರ ಅನುಕೂಲಕ್ಕೆ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಆರೋಗ್ಯ ಕಾರ್ಡ್ ಎಲ್ಲಿಯೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಶಾಸಕ ಎನ್.ಎ.ಹ್ಯಾರಿಸ್ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎನ್.ಎ.ಹ್ಯಾರಿಸ್, ನಗರದ ಯಾವುದೇ ಆಸ್ಪತ್ರೆಗೆ ಆಯುಷ್ಮಾನ್ ಕಾರ್ಡ್ ತೆಗೆದುಕೊಂಡು ಹೋದರೆ ಅದನ್ನು ವೈದ್ಯರು ಸ್ವೀಕರಿಸುತ್ತಿಲ್ಲ. ಕಾರ್ಡ್ ಪಡೆದು ಮಾನ್ಯತೆ ಇಲ್ಲದಂತಾಗಿದೆ. ಕಾರ್ಡ್ಅನ್ನು ಸಮರ್ಪಕವಾಗಿ ಬ್ಯಾಕಪ್ ಮಾಡದೆ ನೀಡುತ್ತಿರುವುದು ಸರಿಯಾದ ಕ್ರಮ ಅಲ್ಲ. ಇದು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಮೋಸವಾಗಿದೆ. ಕೇವಲ ಸುಳ್ಳನ್ನೇ ಹೇಳಿ ಅಧಿಕಾರ ನಡೆಸಿಕೊಂಡು ಹೋಗುವ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ನಮ್ಮ ಕ್ಷೇತ್ರದಲ್ಲಿಯೂ ಬಡವರಿಗೆ ಅನುಕೂಲವಾಗಲಿ ಎಂದು ಕಾರ್ಡುಗಳನ್ನು ಮಾಡಿಸಿದ್ದೇವೆ. ಬಿಪಿಎಲ್ ಕಾರ್ಡು ಉಳ್ಳವರಿಗೆ 5 ಲಕ್ಷ ರೂ. ಹಾಗೂ 1.50 ಲಕ್ಷ ರೂಪಾಯಿವರೆಗಿನ ಆರೋಗ್ಯ ವಿಮೆ ಎಪಿಎಲ್ ಕಾರ್ಡ್ ಹೊಂದಿದವರಿಗೆ ಸಿಗಲಿದೆ ಎಂದು ನಿರೀಕ್ಷಿಸಿದ್ದೆವು. ಎಲ್ಲೂ ಈ ಕಾರ್ಡನ್ನು ಸ್ವೀಕರಿಸುತ್ತಿಲ್ಲ, ನಾವು ಕರೆ ಮಾಡಿದರೆ ಇದರ ಬಳಕೆ ಇಲ್ಲಿ ಇಲ್ಲ ಎನ್ನುತ್ತಿದ್ದಾರೆ. ಕಾರ್ಡ್ನಲ್ಲೊಂದು ಟೋಲ್ ಫ್ರೀ ಸಂಖ್ಯೆಯನ್ನು ಕೊಡಲಾಗಿದೆ. ಕರೆ ಮಾಡಿದರೆ ಯಾರೂ ಕೂಡಾ ಸ್ವೀಕರಿಸುತ್ತಿಲ್ಲ. ಇದೊಂದು ದೊಡ್ಡ ವಿಚಾರವಾಗಿದ್ದು, ಚುನಾವಣೆ ನಂತರ ಈ ವಿಚಾರವನ್ನು ಕೈಗೆತ್ತಿಕೊಳ್ಳುತ್ತೇನೆ. ಈ ಸಂಬಂಧ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.