ಬೆಂಗಳೂರು:ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಏನೂ ಸತ್ಯ ಹರಿಶ್ಚಂದ್ರ ಅಲ್ಲ, ಅವರು ತಾಜ್ ವೆಸ್ಟ್ ಎಂಡ್ನ ನಾಯಕ, ತಾಜ್ ವೆಸ್ಟ್ ಎಂಡ್ ಬಗ್ಗೆ ಇನ್ನೂ ಎಳೆ ಎಳೆಯಾಗಿ ಬಿಚ್ಚಿಡಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದರು. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಾಹ್ಮಣರ ಸಮುದಾಯದ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಈ ರೀತಿ ಅವಹೇಳನ ಮಾಡಬಾರದು, ಇದನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ಕುಮಾರಸ್ವಾಮಿ ಸ್ವಜಾತಿ ಕೂಪ ಮಂಡೂಕ ಸ್ವಜಾತಿ ಬಿಟ್ಟು ಹೊರಗೆ ಬರಲ್ಲ ಅವರು, ತಮ್ಮ ಕುಟುಂಬ, ಮನೆ ಬಿಟ್ಟು ಹೊರಗೆ ಬರಲಿ, ಅವರ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಅಂತ ಹೇಳಲಿ, ಅವರು ಸಿಎಂ ಆಗಿದ್ದಾಗ ತಾಜ್ ವೆಸ್ಟ್ ಎಂಡ್ ಹೋಟೆಲ್ನಿಂದ ಆಡಳಿತ ಮಾಡುತ್ತಿದ್ದರು. ಇದನ್ನು ಜನ ಮರೆತಿಲ್ಲ, ಅಷ್ಟೊಂದು ಸ್ವಾರ್ಥಿ ರಾಜಕಾರಣಿ ಅವರು ಎಂದು ಹೆಚ್ಡಿಕೆ ವಿರುದ್ಧ ರವಿಕುಮಾರ್ ತೀವ್ರ ವಾಗ್ದಾಳಿ ನಡೆಸಿದರು.
ಹೆಚ್ಡಿಕೆ ಭಯದಿಂದ ಚಡಪಡಿಸುತ್ತಿದ್ದಾರೆ:ಗಾಂಧಿ ಅವರ ಹತ್ಯೆ ಪ್ರಕರಣ ಬಗ್ಗೆ ಜಸ್ಟೀಸ್ ಕಪೂರ್ ಕಮಿಟಿ ವರದಿ ಕೊಟ್ಟಿದೆ. ಈ ವರದಿಯನ್ನು ಕುಮಾರಸ್ವಾಮಿ ಓದಲಿ, ಗಾಂಧಿ ಹತ್ಯೆ ಪ್ರಕರಣದಲ್ಲಿ ಸಂಘ ಪರಿವಾರದ ಪಾತ್ರ ಇಲ್ಲ ಅಂತ ವರದಿಯಲ್ಲಿದೆ, ಸುಪ್ರೀಂಕೋರ್ಟ್ ಕೂಡಾ ಇದನ್ನೇ ಹೇಳಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸತ್ಯ ಹೇಳಿದ್ದಾರೆ, ಅಷ್ಟಕ್ಕೇ ಕುಮಾರಸ್ವಾಮಿ ಅವರಿಗೆ ಸಿಟ್ಟು ಬಂದಿದೆ. ರಾಜ್ಯದಲ್ಲಿ ಸ್ಮಾರ್ಥ ಬ್ರಾಹ್ಮಣರು, ಪೇಶ್ವೆ ಬ್ರಾಹ್ಮಣರು ಅಂತ ಇಲ್ಲ. ಮಹಾರಾಷ್ಟ್ರದಲ್ಲಿ ಇರೋದು, ಕುಮಾರಸ್ವಾಮಿ ಅವರು ಇದರಲ್ಲಿ ಪಿಹೆಚ್ಡಿ ಮಾಡಿದ್ದಾರಾ? ಅವರ ಕಿರುಕುಳಕ್ಕೆ ಅವರ ಪಕ್ಷದಲ್ಲಿ ಇದ್ದ ಬ್ರಾಹ್ಮಣ ನಾಯಕ ವೈಎಸ್ವಿ ದತ್ತಾ ಜೆಡಿಎಸ್ ಪಕ್ಷ ಬಿಟ್ಟು ಹೋಗಿದ್ದಾರೆ. ಬ್ರಾಹ್ಮಣರು ಸಿಎಂ, ಎಂಟು ಜನ ಡಿಸಿಎಂ ಮಾಡೋ ಬಗ್ಗೆ ಚರ್ಚೆ ಆಗಿಲ್ಲ, ಆಥರ ಏನೂ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬರುವ ಭಯದಿಂದ ಅವರು ಹೀಗೆ ಮಾತಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಹೆಚ್ಡಿಕೆ ಭಯದಿಂದ ಚಡಪಡಿಸುತ್ತಿದ್ದಾರೆ ಎಂದರು.