ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆಗಳಲ್ಲಿ ಹೂಳೆತ್ತುವ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ದಕ್ಷಿಣ ವಿಭಾಗದ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ರಾಜಕಾಲುವೆ ಹೂಳೆತ್ತುವ ಕೆಲಸದಲ್ಲಿ ಭಾರೀ ಅವ್ಯವಹಾರ: ಎನ್.ಆರ್ ರಮೇಶ್ ಆರೋಪ - ಬೆಂಗಳೂರು ದಕ್ಷಿಣ ವಿಭಾಗದ ಬಿಜೆಪಿ ಅಧ್ಯಕ್ಷ ಎನ್ .ಆರ್ ರಮೇಶ್
ಇವತ್ತು ಒಬ್ಬ ಗುತ್ತಿಗೆದಾರನಿಗೆ ವರ್ಕ್ ಆರ್ಡರ್ ಕೊಟ್ಟು ಒಂದೇ ದಿನದಲ್ಲಿ ಬಿಆರ್ ಹಾಕಿ ಬಿಲ್ ಪೇಮೆಂಟ್ಗೆ ಅಪ್ಲೋಡ್ ಮಾಡಿದ್ದಾರೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
2018 ಮತ್ತು 19ನೇ ಸಾಲಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ 847 ಕಿ.ಮೀ. ಉದ್ದದ ರಾಜಕಾಲುವೆಗಳಲ್ಲಿ 210 ಕಿ.ಮೀ. ರಾಜಕಾಲುವೆಗಳಲ್ಲಿ ಒಟ್ಟು 6 ಲಕ್ಷದ 49 ಸಾವಿರ ಕ್ಯೂಬಿಕ್ ಮೀಟರ್ಗಳಷ್ಟು ಹೂಳೆತ್ತಿರುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಹೂಳೆತ್ತುವುದಾಕ್ಕಾಗಿ 29 ಕೋಟಿ ಹಣ ವೆಚ್ಚ ಮಾಡಿರುವುದಾಗಿ ತಿಳಿಸಿ ನಂಬಲು ಅಸಾಧ್ಯವಾದ ದಾಖಲೆಗಳನ್ನು ಇಲಾಖೆಯ ಅಧಿಕಾರಿಗಳು ನೀಡಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೊಟ್ಟಿರುವ ಮಾಹಿತಿ ಪ್ರಕಾರ ಹೂಳಿನ ಪ್ರಮಾಣ ಎರಡು ನಂದಿ ಬೆಟ್ಟಗಳಷ್ಟಿದೆ.
ಇನ್ನು ಈ ಹೂಳನ್ನು ಎಲ್ಲಿ ಹಾಕಿದ್ದೀರಾ ಎಂದು ಕೇಳಿದ್ದಕ್ಕೆ ಅಧಿಕಾರಿಗಳು ಅಂಜನಾಪುರ ಕ್ವಾರಿ ಮತ್ತು ಬೆಳ್ಳಳ್ಳಿ ಕ್ವಾರಿಯಲ್ಲಿ ಹಾಕಿರುವುದಾಗಿ ತಿಳಿಸಿದ್ದರು. ಆದರೆ ನಾವು ಅಲ್ಲಿಗೆ ಹೋಗಿ ಪರಿಶೀಲಿಸಿದಾಗ ಬೆಳ್ಳಳ್ಳಿ ಕ್ವಾರಿಯಲ್ಲಿ ಸಣ್ಣ ಪ್ರಮಾಣದ ಹೂಳಿನ ರಾಶಿ ಕಂಡು ಬಂತು. ಆದರೆ ಬಿಬಿಎಂಪಿ ಅಧಿಕಾರಿಗಳು ತಿಳಿಸಿರುವ ಮಾಹಿತಿ ಪ್ರಕಾರ ಶೇ. 11ರಷ್ಟು ಹೂಳನ್ನು ಮಾತ್ರ ಆ ಎರಡು ಕ್ವಾರಿಗಳಲ್ಲಿ ಹಾಕಬಹುದು. ಇನ್ನುಳಿದ ಶೇ. 89ರಷ್ಟು ಪ್ರಮಾಣದ ಹೂಳನ್ನು ಎಲ್ಲಿ ಹಾಕಿದ್ದಾರೆ ಎಂಬುದು ಚಿದಂಬರ ರಹಸ್ಯವಾಗಿದೆ. ಇದನ್ನು ಗಮನಿಸಿದರೆ ದೊಡ್ಡ ಮಟ್ಟದಲ್ಲಿ ಅವ್ಯವಹಾರವಾಗಿದೆ. ಒಂದೇ ದಿನದಲ್ಲಿ ಗುತ್ತಿಗೆದಾರ ಇಷ್ಟು ಪ್ರಮಾಣದ ಕೆಲಸ ಮಾಡಲು ಹೇಗೆ ಸಾಧ್ಯ? ಇದರಿಂದ ರಾಜಕಾಲುವೆಗಳಲ್ಲಿ ಹೂಳೆತ್ತುವ ವಿಚಾರದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.