ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಆ್ಯಂಡ್ ಟೀಮ್​ನಿಂದ 400 ಕೋಟಿ ರೂಪಾಯಿ ಆಸ್ತಿ ಲೂಟಿ : ಲೋಕಾಯುಕ್ತಕ್ಕೆ ಎನ್​ ಆರ್ ರಮೇಶ್ ದೂರು - ಸಿದ್ದರಾಮಯ್ಯ ವಿರುದ್ದ ಭೂ ಸ್ವಾಧೀನ ಆರೋಪ

ಸಿದ್ದರಾಮಯ್ಯ ಮತ್ತು ಟೀಮ್ 400 ಕೋಟಿ ರೂ. ಮೌಲ್ಯದ ಸರ್ಕಾರಿ ಸ್ವತ್ತನ್ನು ಕಬಳಿಸಿದ್ದಾರೆ ಎಂದು ಬಿಜೆಪಿಯ ಎನ್​.ಆರ್​ ರಮೇಶ್​ ಆರೋಪಿಸಿ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೇನೆ ಎಂದು ತಿಳಿಸಿದರು.

KN_BNG_
ಎನ್.ಆರ್.ರಮೇಶ್

By

Published : Nov 23, 2022, 4:35 PM IST

Updated : Nov 23, 2022, 6:18 PM IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಣಾಕ್ಷತನದಿಂದ ಡಿ ನೋಟಿಫಿಕೇಷನ್ ಹೆಸರು ಬಳಸಿ 400ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ ಸ್ವತ್ತು ಪರರ ಪಾಲಾಗುವಂತೆ ಮಾಡಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವುದಾಗಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್​ ಆರ್​ ರಮೇಶ್ ತಿಳಿಸಿದರು.

ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿರುವ ಅವರು, ಪೂರ್ತಿ ಪ್ರಕರಣವನ್ನು ಸೂಕ್ತ ತನಿಖೆಗೆ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿದ್ದೇನೆ. ಸಿದ್ದರಾಮಯ್ಯ ಅವರ ತಾಳಕ್ಕೆ ತಕ್ಕಂತೆ ಕುಣಿದಿದ್ದ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಕುಮಾರ್ ಜೈನ್, ಅಧೀನ ಕಾರ್ಯದರ್ಶಿ ನರಸಿಂಹಮೂರ್ತಿ, ನಗರಾಭಿವೃದ್ಧಿ ಇಲಾಖೆ ಕಾನೂನು ಕೋಶದ ಅಧಿಕಾರಿಗಳಾಗಿದ್ದ ಎರ್ಮಲ್ ಕಲ್ಪನಾ, ಬಿಡಿಎ ಆಯುಕ್ತರಾಗಿದ್ದ ಶಾಂಭಟ್ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧವೂ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದೇನೆ ಎಂದು ಹೇಳಿದರು.

ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ಭೂಪಸಂದ್ರ ಗ್ರಾಮದ ಸರ್ವೆ ನಂ.20 ರಲ್ಲಿನ 03 ಎಕರೆ 34 ಗುಂಟೆ ಮತ್ತು ಸರ್ವೆ ನಂ.21 ರಲ್ಲಿ 02 ಎಕರೆ 32 ಗುಂಟೆ ಸೇರಿದಂತೆ ಒಟ್ಟು 06 ಎಕರೆ 26 ಗುಂಟೆ ವಿಸ್ತೀರ್ಣದ ಸುಮಾರು 400 ಕೋಟಿ ರೂ ಗಳಿಗೂ. ಹೆಚ್ಚು ಮೌಲ್ಯದ ಸರ್ಕಾರಿ ಸ್ವತ್ತನ್ನು ಸಿದ್ದರಾಮಯ್ಯ ಆ್ಯಂಡ್​ ಪಟಾಲಂ ಲಪಾಟಯಿಸಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ವಿರುದ್ದ ಎನ್​.ಆರ್​ ರಮೇಶ್​ ಆರೋಪ

1984 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬಡಾವಣೆ ನಿರ್ಮಾಣ:1984 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಆರ್​ಎಂವಿ 2ನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಭೂಪಸಂದ್ರದ ಕೆಲ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡು ಭೂ ಮಾಲೀಕರಿಗೆ ನೀಡಬೇಕಾಗಿದ್ದ ಪರಿಹಾರ ಮೊತ್ತವನ್ನು ಸಿವಿಲ್ ನ್ಯಾಯಾಲಯದಲಲ್ಲಿ ಠೇವಣಿ ಇಟ್ಟಿದೆ.

ಕಾನೂನು ರೀತಿಯಲ್ಲಿ ಭೂ ಸ್ವಾಧೀನ ಪಡಿಸಿಕೊಂಡ ಸ್ವತ್ತುಗಳನ್ನು ಬಿಡಿಎ ತನ್ನ ಎಂಜಿನಿಯರಿಂಗ್ ಇಲಾಖೆಯ ಮೂಲಕ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಬಡಾವಣೆ ನಿರ್ಮಾಣಕ್ಕೆ ಬೇಕಾದ ಎಲ್ಲ ರೀತಿಯ ಮೂಲ ಸೌಕರ್ಯ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಕಾನೂನು ರೀತಿಯಲ್ಲಿ 42 ಮಂದಿ ಅರ್ಜಿದಾರರಿಗೆ ಹಂಚಿಕೆಯನ್ನು ಮಾಡಿ ಪತ್ರವನ್ನು ನೀಡಲಾಗಿದೆ. ಆದರೆ, ಭೂ ಮಾಲೀಕರು ಪರಿಹಾರ ಧನದ ಬಗ್ಗೆ ತಕರಾರು ಎತ್ತಿ ಪ್ರಕರಣವನ್ನು ಹೈ ಕೋರ್ಟ್​ನಲ್ಲಿ ಹಾಗೂ ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನಿಸಿದ್ದಾರೆ. ವಾದ ವಿವಾದ ಆಲಿಸಿದ ಸುಪ್ರೀಂ ಕೋರ್ಟ್ ಕಳೆದ 2015ರಲ್ಲಿ ಸ್ವತ್ತು ಬಿಡಿಎ ಮಾಲೀಕತ್ವಕ್ಕೆ ಸೇರಿದ್ದು ಎಂದು ತೀರ್ಪು ನೀಡಿದೆ ಎಂದು ಹೇಳಿದರು.

ಮೂರನೇ ವ್ಯಕ್ತಿಗಳಿಂದ ಹೈ ಕೋರ್ಟ್​ನಲ್ಲಿ ದಾವೆ:ಆರು ಎಕರೆ ಭೂಮಿ ತಮಗೆ ಸೇರಿದ್ದು ಎಂದು ಮೂರನೇ ವ್ಯಕ್ತಿಗಳಾದ ಜಯಲಕ್ಷ್ಮಮ್ಮ, ವಿಜಯಲಕ್ಷ್ಮಿ ಹಾಗೂ ಪ್ರಭಾಕರ್ ಹೈಕೋರ್ಟ್ ಮೆಟ್ಟೆಲೇರಿದ್ದಾರೆ. ನ್ಯಾಯಲಯದಲ್ಲಿ ತೀರ್ಪು ಅವರ ಪರವೇ ಬರುತ್ತದೆ. ಈ ತೀರ್ಪಿನ ವಿರುದ್ಧ ಬಿಡಿಎ ಮೇಲ್ಮನವಿ ಸಲ್ಲಿಸುತ್ತದೆ. ಆದರೆ, ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಹೈ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಯಾವುದೇ ಮೇಲ್ಮನವಿಯನ್ನು ಸಲ್ಲಿಸಿಲ್ಲ ಎಂದು ತಿಳಿಸಿದರು.

ಚಾಣಾಕ್ಷತನ ಮೆರೆದಿರುವ ಸಿದ್ದರಾಮಯ್ಯ:ಸುಮಾರು 400 ಕೋಟಿ ರೂ. ಬೆಲೆ ಬಾಳುವ ಆರು ಎಕರೆ ಭೂಮಿ ಮೂರನೇ ವ್ಯಕ್ತಿಗಳ ಪಾಲಾಗಲು ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸಹಕಾರ ನೀಡಿದ್ದಾರೆ. ಕೆಲ ಸರ್ಕಾರಿ ಅಧಿಕಾರಿಗಳ ಸಹಕರವೂ ಇದೆ. ಮುಂದಿನ ದಿನಗಳಲ್ಲಿ ತಾವು ಮಾಡಿದ ಕಾನೂನು ಬಾಹಿರ ಕಾರ್ಯ ಒಂದು ವೇಳೆ ಹೊರಬಂದರೂ ಸಹ ತಾವು ಇದರಲ್ಲಿ ಸಿಕ್ಕಿ ಹಾಕಿಕೊಳ್ಳದಂತೆ ಅತ್ಯಂತ ನಾಜೂಕಾಗಿ ನಗರಾಭಿವೃದ್ಧಿ ಇಲಾಖೆಯ ಕಾನೂನು ಕೋಶದ ಅಧಿಕಾರಿಯ ಅಭಿಪ್ರಾಯವನ್ನು ಸಿದ್ಧರಾಮಯ್ಯ ಪಡೆದುಕೊಂಡು ಚಾಣಾಕ್ಷತನ ಮೆರೆದಿದ್ದಾರೆ ಎಂದು ಮಾಹಿತಿ ನೀಡಿದರು.

ಸರ್ಕಾರಿ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆಗೆ ಆಗ್ರಹ:ಕಾನೂನು ಕೋಶದ ಮುಖ್ಯಸ್ಥರೇ ಅಕ್ರಮಕ್ಕೆ ಸಹಕರಿಸಿದ್ದಾರೆ. ಬಿಡಿಎ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಾಪಸ್ ಪಡೆದಿರುವ ಪರಿಣಾಮ 400 ಕೋಟಿ ಮೌಲ್ಯದ ಭೂಮಿ ಕಂಡವರ ಪಾಲಾಗಿದೆ. ಹೀಗಾಗಿ 400 ಕೋಟಿ ರೂ ಮೌಲ್ಯದ ಭೂಮಿ ಕಂಡವರ ಪಾಲಾಗಲು ಕಾರಣರಾಗಿರುವ ಸಿದ್ದರಾಮಯ್ಯ ಹಾಗೂ ಅಂದಿನ ಕೆಲ ಸರ್ಕಾರಿ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಎನ್​ ಆಋ್​ ರಮೇಶ್​ ಒತ್ತಾಯಿಸಿದರು.

ಇದನ್ನೂ ಓದಿ:ಮಾಜಿ ಸ್ಪೀಕರ್ ರಮೇಶ್ ಕುಮಾರ್​ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ: ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

Last Updated : Nov 23, 2022, 6:18 PM IST

ABOUT THE AUTHOR

...view details