ಬೆಂಗಳೂರು: ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್ ಪ್ರತಿನಿಧಿಸುವ ಚಾಮರಾಜನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾನಲ್ಲ. ಆದರೆ ಪಕ್ಷದ ವರಿಷ್ಠರು ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುತ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ದ ಎಂದು ಮಾಜಿ ಸಚಿವ ಹಾಗು ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿರುವ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಇಂದು ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿದ ಎನ್.ಮಹೇಶ್ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಟೀಮ್ ಬಿಜೆಪಿ ರಚನೆಯಾಗಿದೆ. ನನ್ನನ್ನು ಚಾಮರಾಜನಗರ ಭಾಗದಿಂದ ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಿದ್ದಾರೆ. ಅದಕ್ಕಾಗಿ ರಾಜ್ಯಾಧ್ಯಕ್ಷರು, ರಾಜ್ಯ- ಕೇಂದ್ರದ ನಾಯಕರಿಗೆ ಜಿಲ್ಲೆಯ, ರಾಜ್ಯದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಈ ಟೀಮ್ ಬಿಜೆಪಿ, ಸಾಮಾಜಿಕ, ಭೌಗೋಳಿಕ, ಬಹಳ ವ್ಯವಸ್ಥಿತವಾಗಿ ರಚನೆಯಾಗಿದೆ. ಯಾವ ಗೊಂದಲವೂ ಇಲ್ಲ. 2024ರ ಲೋಕಸಭಾ ಚುನಾವಣೆಯನ್ನು ನಮ್ಮ ತಂಡ ಸಮರ್ಥವಾಗಿ ಎದುರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ತಂಡಕ್ಕೆ ಇನ್ಯಾರನ್ನು ನೇಮಿಸಬೇಕೆಂಬ ವಿಷಯ ಸೂಕ್ತ ಸಮಯದಲ್ಲಿ ತೀರ್ಮಾನ ಆಗಲಿದೆ. ಚುನಾವಣೆ ವೇಳೆಗೆ ಗಟ್ಟಿಯಾದ ಟೀಮ್ ಫೀಲ್ಡಿಗೆ ಇಳಿಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ಕಲ್ಪನೆಗೆ, 2047ರವೇಳಗೆ ಭಾರತ ಅತ್ಯಂತ ಅಭಿವೃದ್ಧಿ ಹೊಂದಿದ ದೇಶ ಎನಿಸಬೇಕೆಂಬ ಸಂಕಲ್ಪಕ್ಕೆ ಪ್ರಥಮ ಹೆಜ್ಜೆಯಾಗಿ 2024ರ ಚುನಾವಣೆ ಬರಲಿದೆ ಎಂದು ಮಹೇಶ್ ವಿಶ್ಲೇಷಿಸಿದರು.