ಬೆಂಗಳೂರು: ರಾಜ್ಯ ಸರ್ಕಾರ, ಬೇಕಾದವರಿಗೆ ಮೈಶುಗರ್ ಕಾರ್ಖಾನೆಯನ್ನು ನೀಡಲು ಅದು ಕಿರಾಣಿ ಅಂಗಡಿಯಲ್ಲ. ಯಾವುದೇ ಕಾರ್ಖಾನೆಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡಬೇಕಾದರೆ ಪಾರದರ್ಶಕ ನಿಯಮಗಳಡಿ ಸರ್ಕಾರ ಟೆಂಡರ್ ಕರೆಯಬೇಕು. ಟೆಂಡರ್ ನಿಯಮಾನುಸಾರ ತಾಂತ್ರಿಕ ಹಾಗೂ ಆರ್ಥಿಕ ಅರ್ಹತೆಯನ್ನಾಧರಿಸಿ ಕಾರ್ಖಾನೆಯನ್ನು ಗುತ್ತಿಗೆಗೆ ನೀಡಲಾಗುತ್ತದೆ. ಈ ಸಾಮಾನ್ಯ ಮಾಹಿತಿಯು ನನ್ನ ಮೇಲೆ ನಿರಾಧಾರ ಆರೋಪ ಮಾಡುವವರು ತಿಳಿದುಕೊಳ್ಳಬೇಕು ಎಂದು ಶಾಸಕ ಮುರುಗೇಶ್ ನಿರಾಣಿ ತಿರುಗೇಟು ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ರಾಜ್ಯಸರ್ಕಾರ ಟೆಂಡರ್ ಅಧಿಸೂಚಿಸಿದರೆ ಅಂದು ನನಗೆ ಅರ್ಹತೆ ಮತ್ತು ಆಸಕ್ತಿ ಇದ್ದರೆ ನಾನು ಟೆಂಡರ್ನಲ್ಲಿ ಪಾಲ್ಗೊಳ್ಳುತ್ತೇನೆ. ಮೈಶುಗರ್ ಕಾರ್ಖಾನೆ ಕಳೆದ ನಾಲ್ಕು ವರ್ಷಗಳಿಂದ ಪೂರ್ಣ ಮಟ್ಟದಲ್ಲಿ ನಡೆದಿಲ್ಲ. ಕೆಲವೇ ತಿಂಗಳುಗಳು ಕಾರ್ಖಾನೆ ಕಬ್ಬು ಅರೆದಿದೆ ಅಷ್ಟೆ. ಇಂತಹ ರೋಗಗ್ರಸ್ತ ಕಾರ್ಖಾನೆಯನ್ನು ರೋಗಗ್ರಸ್ತವಾಗಿಯೇ ಮುಂದುವರೆಯಲು ಬಿಡಬೇಕೋ ಅಥವಾ ಕಾರ್ಖಾನೆ ಪೂರ್ಣಪ್ರಮಾಣದಲ್ಲಿ ಕಬ್ಬು ಅರೆಯಲು ಆರಂಭಿಸಬೇಕೋ ಎಂಬುದನ್ನು ರಾಜ್ಯ ಸರ್ಕಾರ, ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು, ರೈತ ಹಿತರಕ್ಷಣಾ ಹೋರಾಟ ಸಮಿತಿಗಳು, ವಿವಿಧ ರೈತ ಸಂಘಟನೆಗಳು ಹಾಗೂ ಕಬ್ಬು ಬೆಳೆಗಾರರು ನಿರ್ಧರಿಸುವ ಕಾಲ ಸನ್ನಿಹಿತವಾಗಿದೆ ಎಂದು ಪ್ರಸ್ತುತ ವಿದ್ಯಮಾನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಮೈಶುಗರ್ ಕಾರ್ಖಾನೆ ಜೊತೆ ನನ್ನ ಹೆಸರನ್ನು ತಳುಕುಹಾಕುವುದು ಬೇಡ ಎಂದು ವಿನಮ್ರವಾಗಿ ವಿನಂತಿಸುತ್ತೇನೆ. ಕೆ.ಆರ್.ಎಸ್ ಜಲಾಶಯಕ್ಕಿಂತ ಆಲಮಟ್ಟಿ ಜಲಾಶಯ ತುಂಬಾ ದೊಡ್ಡದು, ನಾನು ನಮ್ಮ ಭಾಗದಲ್ಲಿಯೇ ಇನ್ನೂ ನಾಲ್ಕೈದು ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲು ಅವಕಾಶವಿದೆ. ಹೀಗಾಗಿ ಮಂಡ್ಯದಲ್ಲಿನ ಕಾರ್ಖಾನೆಗಳನ್ನೇ ನಡೆಸಬೇಕೆಂಬ ಹಠವಾಗಲೀ, ಯಾವುದೇ ಹಿತಾಸಕ್ತಿಯಾಗಲೀ ನನಗಿಲ್ಲ. ನಾನು ಯಶಸ್ವಿ ಉದ್ಯಮಿಯಾಗಿದ್ದು, ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಕೊಡುಗೆ ನೀಡಿದ್ದೇನೆ. ನಾನು ಮಹಾನ್ ಲೂಟಿ ಕೋರನೂ ಅಲ್ಲ, ಕಳ್ಳತನವನ್ನು ಮಾಡುವ ಅಗತ್ಯವೂ ನನಗಿಲ್ಲ. ಇದೇ ರೀತಿಯ ನಿರಾಧಾರ ಆರೋಪಗಳನ್ನು ನನ್ನ ಮೇಲೆ ವಿನಾಕಾರಣ ಮಾಡಿದರೆ ಕಾನೂನಿನ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾನು 6 ಸಕ್ಕರೆ ಕಾರ್ಖಾನೆಗಳ ಮಾಲೀಕತ್ವ ಹೊಂದಿದ್ದು, ಪ್ರತಿದಿನ 50 ಸಾವಿರ ಟನ್ಕಬ್ಬು ಅರೆದು,200 ಮೆಗಾವ್ಯಾಟ್ ವಿದ್ಯುತ್, 8 ಲಕ್ಷ ಇಥೆನಾಲ್, 400 ಮೆಟ್ರಿಕ್ ಟನ್ ಸಿಒ-2 & ಸಿಎನ್ ಜಿ ಉತ್ಪಾದಿಸುತ್ತಿದ್ದೇನೆ. ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಕ್ಕರೆ, ಇಥೆನಾಲ್,ವಿದ್ಯುತ್ ಉತ್ಪಾದಿಸುವ ದಾಖಲೆ ಹೊಂದಿದ್ದೇನೆ. ಅತೀ ಶೀಘ್ರದಲ್ಲಿ ಜೆಟ್ ಫ್ಯೂಯೆಲ್ ವಿಮಾನಗಳಿಗೆ ಇಥೆನಾಲ್ಒದಗಿಸುವ ಪ್ರಯತ್ನದಲ್ಲಿದ್ದೇನೆ. ಇಷ್ಟು ಸಾಧನೆಗಳನ್ನು ಮಾಡಿರುವ ನನ್ನ ಮೇಲೆ ನಿರಾಧಾರ ಆರೋಪಗಳನ್ನು ಮಾಡುವವರಿಗೆ ಹಾಗೂ ಹಗುರವಾಗಿ ಮಾತನಾಡುವವರಿಗೆ ಶೋಭೆ ತರುವುದಿಲ್ಲ. 2019-20 ನೇ ಸಾಲಿನ ಕಬ್ಬಿನ ಹಣ ಪಾವತಿ ಬಾಕಿ 22 ಕೋಟಿ ಇದ್ದು, ಒಂದು ವಾರದಲ್ಲಿಕಬ್ಬು ಬೆಳೆಗಾರರಿಗೆ ಪಾವತಿಸುತ್ತೇನೆ. ಒಟ್ಟಾರೆ ನನ್ನ ಸಕ್ಕರೆ ಕಾರ್ಖಾನೆಗಳ ಪೂರ್ಣ ವಹಿವಾಟಿನ ಶೇ. 98ರಷ್ಟು ಹಣವನ್ನುಕಬ್ಬು ಬೆಳೆಗಾರರಿಗೆ ಪಾವತಿಸಿದ್ದೇನೆ. ಒಟ್ಟು 3ಸಾವಿರ ಕೋಟಿ ವಹಿವಾಟಿನಲ್ಲಿ ಕೇವಲ 22ಕೋಟಿ ಬಾಕಿ ಇದೆಎಂಬುದನ್ನು ಆರೋಪ ಮಾಡುವವರು ತಿಳಿದುಕೊಳ್ಳಬೇಕು ಎಂದರು.
ಯದುವೀರ್ ಒಡೆಯರ್ ರವರನ್ನು ನಾನು ಭೇಟಿಯೇ ಮಾಡಿಲ್ಲ. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಮೈಶುಗರ್ ಕಾರ್ಖಾನೆಯನ್ನು ಒ ಅಂಡ್ ಎಂ ವ್ಯವಸ್ಥೆಯಲ್ಲಾದರೂ ಆರಂಭಿಸುವಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಜಮನೆತನವನ್ನು ಈ ವಿಷಯದಲ್ಲಿ ಸೇರಿಸಿ ಹೇಳಿಕೆಗಳನ್ನು ನೀಡುವುದು ಸರಿಯಾದ ಕ್ರಮವಲ್ಲ. ಈ ನಿಟ್ಟಿನಲ್ಲಿ ಕಪೋಲ ಕಲ್ಪಿತ ಹೇಳಿಕೆಯನ್ನು ಕೊಡುವುದು ಸ್ವಾಭಿಮಾನಿ ಮಂಡ್ಯ ಜನತೆಯ ಘನತೆ ಗೌರವಕ್ಕೆ ಶೋಭೆ ತರುವ ವಿಷಯವಲ್ಲ. ನಾನೂ ಸಹ ಕರ್ನಾಟಕದವನೇ. ನಾನೇನು ಹೊರದೇಶದವನಲ್ಲ. ಒಟ್ಟಾರೆಯಾಗಿ ಕಬ್ಬು ಬೆಳೆಗಾರರ ಹಿತ ರಕ್ಷಿಸುವುದೊಂದೇ ಇದರ ಹಿಂದಿನ ಉದ್ದೇಶವಾಗಿದೆ ಎಂದಿದ್ದಾರೆ.