ಮೈಸೂರು: ವಿಶೇಷವಾಗಿ ಯುವಕರನ್ನು ಸೆಳೆದು ಕಡ್ಡಾಯ ಮತದಾನದ ಬಗ್ಗೆ ಅರಿವು ಮೂಡಿಸಲು ಹಾಗೂ ಪ್ರಜಾಪ್ರಭುತ್ವವನ್ನು ಬಲಪಡಿಸುವ ಚಿಂತನೆಯೊಂದಿಗೆ ಜಾಗೃತಿ ಮೂಡಿಸಲು ಮೈಸೂರು ಜಿಲ್ಲಾ ಸ್ವೀಪ್ ಸಮಿತಿ`ವೋಟ್ ಇಂಡಿಯಾ' ಎಂಬ ವಿಡಿಯೋ ಹಾಡನ್ನು ಬಿಡುಗಡೆಗೊಳಿಸಿದೆ.
ಸ್ವೀಪ್ ಕಾರ್ಯಕ್ರಮದ ಐಕಾನ್ ಆಗಿರುವ ಸರಿಗಮಪ ಖ್ಯಾತಿಯ ಗಾಯಕ ಶ್ರೀಹರ್ಷ ಅವರು ರಚಿಸಿ, ನಿರ್ದೇಶಿಸಿರುವ ಈ ವಿಡಿಯೋ ಗೀತೆಯನ್ನು ಸ್ವೀಪ್ ಸಮಿತಿಯಿಂದ ಬಿಡುಗಡೆ ಮಾಡಲಾಗಿದೆ. ಮತದಾನ ಮಾಡುವುದು ನಮ್ಮ ಹಕ್ಕು ಮತ್ತು ಕರ್ತವ್ಯವಾಗಿದೆ. ಪ್ರತಿಯೊಬ್ಬರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂಬ ಸಂದೇಶವನ್ನು ಈ ಗೀತೆ ಸಾರುತ್ತದೆ.
ಹೊಸ ರೀತಿಯಲ್ಲಿ ಜನರನ್ನು ಈ ಹಾಡು ತಲುಪಲಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಜನರನ್ನು ತಲುಪಲಿದೆ. ಸರಳವಾದ ನೃತ್ಯವನ್ನು ಒಳಗೊಂಡಿದೆ. ಈ ಗೀತೆಯ ನಂತರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹಾಗೂ ಜಿಲ್ಲಾ ಪಂಚಾಯತ್ ಸಿ.ಇ.ಒ. ಕೆ. ಜ್ಯೋತಿ ಅವರ ಸಂದೇಶವೂ ಸಹ ಪ್ರಸಾರವಾಗುತ್ತದೆ.
ಯುವ ಸಮೂಹ ಹಾಗೂ ವಿದ್ಯಾರ್ಥಿಗಳು 'ವೋಟ್ ಇಂಡಿಯಾ' ಹಾಡನ್ನು ಅದೇ ರಾಗದಲ್ಲಿ ವಿವಿಧ ರೀತಿಯ ಮೊಬೈಲ್ ಆ್ಯಪ್ಗಳಾದ ಟಿಕ್ ಟಾಕ್, ಲೈಕ್ ಆಪ್ ಹಾಗೂ ಡಬ್ಸ್ ಸ್ಮ್ಯಾಶ್ ಮೂಲಕ ಪ್ರಯೋಗಗಳನ್ನು ಮಾಡಬಹುದು. ಇದರಿಂದ ಹೆಚ್ಚು ಜನರನ್ನು ಸೆಳೆಯಲು ಹಾಗೂ ಹೆಚ್ಚು ವೀಕ್ಷಕರನ್ನು ಸೆಳೆಯಲು ಯೂಟೂಬ್ ಲಿಂಕ್ ಮೂಲಕ ವೋಟ್ ಇಂಡಿಯಾ ಹಾಡನ್ನು ಹೆಚ್ಚು ವೈರಲ್ ಮಾಡಲು ಮುಂದಾಗಿದೆ.