ಬೆಂಗಳೂರು :ಕೆರೆ ಪ್ರದೇಶದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಲು ಅನುಮತಿ ನೀಡಿದ್ದ ಅಧಿಕಾರಿ ವಿರುದ್ಧ ಕ್ರಮಕೈಗೊಂಡು, ವರದಿ ಸಲ್ಲಿಸುವಂತೆ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸದ ಮೈಸೂರು ಜಿಲ್ಲಾಧಿಕಾರಿಗೆ ಹೈಕೋರ್ಟ್ ನ್ಯಾಯಾಂಗ ನಿಂದನೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಕೆರೆಯಲ್ಲಿ ಸಂಸ್ಕರಣಾ ಘಟಕ ನಿರ್ಮಾಣ ಮಾಡುವುದನ್ನು ಪ್ರಶ್ನಿಸಿ ಮೈಸೂರಿನ ಕೂರ್ಗಹಳ್ಳಿ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಹೈಕೋರ್ಟ್ ಆದೇಶವನ್ನು ಜಿಲ್ಲಾಧಿಕಾರಿ ಪಾಲಿಸಿಲ್ಲ ಎಂಬ ವಿಚಾರಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಪೀಠ, ನಿಮ್ಮ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಗೆತ್ತಿಕೊಳ್ಳಬಾರದು ಎಂಬ ಬಗ್ಗೆ ವಿವರಣೆ ನೀಡುವಂತೆ ಮೈಸೂರು ಜಿಲ್ಲಾಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ-ಮೈಸೂರಿನ ಕೂರ್ಗಹಳ್ಳಿ ಕೆರೆಯ ಸರ್ವೇ ನಂಬರ್ 160ರಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಿಸಲಾಗುತ್ತಿದೆ. ವಿಚಾರಣೆ ವೇಳೆ ಈ ಜಾಗವು ಕೆರೆ ಪ್ರದೇಶ ಎಂಬುದು ಮೇಲ್ನೋಟಕ್ಕೆ ದೃಢಪಟ್ಟ ಹಿನ್ನೆಲೆ, ಪ್ರಕರಣವನ್ನು ಸಂಪೂರ್ಣ ಪರಿಶೀಲಿಸಬೇಕು. ಘಟಕ ಸ್ಥಾಪನೆಗೆ ಅನುಮತಿ ನೀಡಿದ ಅಧಿಕಾರಿ ವಿರುದ್ಧ ಕ್ರಮ ಜರುಗಿಸಿ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ 2021ರ ಏಪ್ರಿಲ್ 7ರಂದು ಮೈಸೂರು ಜಿಲ್ಲಾಧಿಕಾರಿಗೆ ನಿರ್ದೇಶಿಸಿತ್ತು.
ಜೂನ್ 6 ಮತ್ತು 26ರಂದು ವಿಚಾರಣೆಗೆ ಬಂದಾಗಲೂ ನ್ಯಾಯಾಲಯದ ನಿರ್ದೇಶನ ಪಾಲಿಸಿದ ಬಗ್ಗೆ ಜಿಲ್ಲಾಧಿಕಾರಿ ವರದಿ ಸಲ್ಲಿಸಿರಲಿಲ್ಲ. ಬದಲಿಗೆ ಸರ್ಕಾರದ ಪರ ವಕೀಲರು ಹಾಜರಾಗಿ, ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆಯಾಗಿದ್ದಾರೆ. ನೂತನ ಜಿಲ್ಲಾಧಿಕಾರಿ ಎರಡು ವಾರದೊಳಗೆ ಕೋರ್ಟ್ ಆದೇಶ ಪಾಲಿಸಿದ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದರು.
ಈ ಹಿನ್ನೆಲೆ ನ್ಯಾಯಾಲಯವು ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿತ್ತು. ಆದರೆ, ಇಂದೂ ಸಹ ಕೋರ್ಟ್ ಆದೇಶ ಪಾಲನೆ ಕುರಿತು ವರದಿ ನೀಡದಿರುವುದು ಕೋರ್ಟ್ ಅಸಮಾಧಾನಕ್ಕೆ ಕಾರಣವಾಯಿತು.
ಓದಿ:ತಗ್ಗಿದ ಕೋವಿಡ್: ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಸರ್ಕಾರದಿಂದ ಒಪ್ಪಿಗೆ