ಬೆಂಗಳೂರು:ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ, ಫೆ.15ರಂದು ವಿಚಾರಣೆಗೆ ಹಾಜರಾಗುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀನಾರಾಯಣರೆಡ್ಡಿ ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಮೈಸೂರಿನ ಇಂದಿರಾಗಾಂಧಿ ರಸ್ತೆಯ ಸಮೀವುಲ್ಲಾ ಷರೀಫ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯಪೀಠ ಈ ಸೂಚನೆ ನೀಡಿದೆ.
ಇದನ್ನೂ ಓದಿ:ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು.. ಕಾಲೇಜ್ ಗೇಟ್ ಬಂದ್ ಮಾಡಿದ ಪ್ರಾಂಶುಪಾಲ
2021ರ ಡಿಸೆಂಬರ್ 14ರಂದು ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಪರವಾನಗಿ ನೀಡುವಾಗ ವಲಯ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರಿನ ಪರಿಸರ ಅಧಿಕಾರಿ ವಿಸ್ತೃತ ವರದಿ ಸಲ್ಲಿಸಿದ್ದಾರೆ. ತನಿಖಾ ವರದಿ ಮೇರೆಗೆ ಪಾಲಿಕೆ ಆಯುಕ್ತರು ಯಾವುದೇ ಕ್ರಮ ಕೈಗೊಂಡಿಲ್ಲ. ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಆಕ್ಷೇಪಣೆ ಸಲ್ಲಿಸಿಲ್ಲ. ಆದ್ದರಿಂದ, ಮುಂದಿನ ವಿಚಾರಣೆಗೆ ಹಾಜರಾಗಬೇಕು ಎಂದು ಪೀಠ ನಿರ್ದೇಶಿಸಿದೆ.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಮೈಸೂರು ಪಾಲಿಕೆ ಆಯುಕ್ತರ ಪರ ಹಾಜರಾದ ವಕೀಲ ಮೋಹನ್‌ಭಟ್, ಆಯುಕ್ತ ಲಕ್ಷ್ಮೀನಾರಾಯಣರೆಡ್ಡಿ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಕ್ವಾರಂಟೈನ್‌ನಲ್ಲಿರುವ ಕಾರಣ, ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು. ಈ ಹಿನ್ನೆಲೆ ಪೀಠಾಧಿಕಾರಿಯು ಆನ್ ಲೈನ್ ಮೂಲಕ ಮುಂದಿನ ವಿಚಾರಣೆಗೆ ಹಾಜರಾಗಬೇಕು ಎಂದು ನಿರ್ದೇಶಿಸಿದ್ದಾರೆ.