ಬೆಂಗಳೂರು:2023 ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. 2024 ರಲ್ಲಿ 28 ಸಂಸದರನ್ನೂ ಆಯ್ಕೆ ಮಾಡಿ ಕಳಿಸಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸುವ ಆಶಯ ನನ್ನದು ಎಂದು ಶಾಸಕ ತಿಪ್ಪಾರೆಡ್ಡಿ ಅಭಿಪ್ರಾಯ ಪಟ್ಟಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇದಿಷ್ಟೇ ನಮ್ಮ ಆಶಯವಾಗಿದೆ. ನಮ್ಮ ಪಕ್ಷದ ಅಧ್ಯಕ್ಷರ ಸೂಚನೆ ಮೇರೆಗೆ ಮಾಧ್ಯಮಗಳಿಗೆ ಮಾಹಿತಿ ನೀಡುವಂತಿಲ್ಲ. ಮುಂದಿನ ಎರಡು ವರ್ಷದಲ್ಲಿ ನಾವು ಚಿತ್ರದುರ್ಗ ಜಿಲ್ಲೆಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು ಎನ್ನುವುದೇ ನನ್ನ ಪ್ರಮುಖ ಒತ್ತಾಯವಾಗಿದೆ ಎಂದರು.
ನಾನು ಹಿರಿಯ ಶಾಸಕ. 6 ಬಾರಿ ಶಾಸಕನಾಗಿದ್ದೇನೆ. ನನಗೆ ಸಚಿವನಾಗುವ ಅವಕಾಶ ಸಿಗಬೇಕಿತ್ತು. ಆದ್ರೆ ಅದು ಸಿಗಲಿಲ್ಲ. ಆದರೆ ಒತ್ತಡ ಹೇರುವ ಕಾರ್ಯ ಮಾಡಿಲ್ಲ. 94 ರಿಂದಲೂ ನಾನು ವಿಧಾನಸಭೆಯಲ್ಲಿ ಇದ್ದೇನೆ. ಬಡವರಿಗೆ ಅತ್ಯಂತ ಅಗತ್ಯವಿರುವ ಆಶ್ರಯ ಮನೆಗಳನ್ನು ನೀಡಬೇಕು ಎಂದು ನಾನು ಒತ್ತಾಯಿಸಿದ್ದೇನೆ. ಮುಂದಿನ ದಿನಗಳಲ್ಲಿ ಇದು ಈಡೇರಲಿದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಕೇಳಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನೊಬ್ಬ ಹಿರಿಯ ಶಾಸಕ ಎಂದಷ್ಟೇ ಹೇಳಿದ್ದೇನೆ. ಬೇರೆ ಯಾವುದೇ ಮಾಹಿತಿ ನೀಡುವುದಿಲ್ಲ. ಪ್ರಾದೇಶಿಕ ಅಸಮಾನತೆ ಇದೆ. ಇದನ್ನ ಸರಿ ಮಾಡುವಂತೆ ಕೋರಿದ್ದೇನೆ. ಭರವಸೆ ಇದೆ. ಪಕ್ಷದ ಶಿಸ್ತನ್ನು ಕಾಪಾಡಿಕೊಳ್ಳಬೇಕಿದೆ. ಒಟ್ಟಾರೆ ಪಕ್ಷದ ಅಭಿವೃದ್ಧಿ ದೃಷ್ಟಿಯಿಂದ ಕೈಗೊಳ್ಳಬೇಕಾಗಿರುವ ಹಾಗೂ ಕೈಗೊಳ್ಳಬಹುದಾಗಿದೆ ವಿಚಾರಗಳ ಕುರಿತು ಮಾಹಿತಿ ಒದಗಿಸಿದ್ದೇನೆ ಎಂದು ವಿವರಿಸಿದರು.