ಬೆಂಗಳೂರು: ಮಂಡ್ಯದ ಮೈ ಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಶಾಸಕರ ನಿಯೋಗಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಸರ್ಕಾರದ ಈ ನಿಲುವಿಗೆ ಮಂಡ್ಯ ಜನತೆಯ ಪರವಾಗಿ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
ಮೈ ಶುಗರ್ ಕಾರ್ಖಾನೆ ಖಾಸಗೀಕರಣ ಆಗಲ್ಲ: ಹೆಚ್ಡಿಕೆ ಸಿಎಂ ಗೃಹ ಕಚೇರಿ ಕೃಷ್ಣಾಗೆ ಜೆಡಿಎಸ್ ನಾಯಕ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಶಾಸಕರಾದ ಸಿ.ಎಸ್. ಪುಟ್ಟರಾಜು, ಶ್ರೀನಿವಾಸ್, ಅನ್ನದಾನಿ, ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡರು ಭೇಟಿ ನೀಡಿದರು. ಸಿಎಂ ಬಿಎಎಸ್ವೈ ಭೇಟಿ ಮಾಡಿದ ನಿಯೋಗ, ಮಂಡ್ಯದ ಮೈ ಶುಗರ್ ಕಾರ್ಖಾನೆ ಖಾಸಗೀಕರಣ ಕುರಿತು ಮಾತುಕತೆ ನಡೆಸಿದರು. ಇತಿಹಾಸವಿರುವ ಕಾರ್ಖಾನೆ ಖಾಸಗೀಕರಣ ಮಾಡದಂತೆ ಮನವಿ ಮಾಡಿದ್ದು, ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಸಿಎಂ ಭೇಟಿ ಬಳಿಕ ಮಾತನಾಡಿದ ಕುಮಾರಸ್ವಾಮಿ, ಮಂಡ್ಯ ಜಿಲ್ಲೆಯ ರೈತ ಸಂಘದ ಮುಖಂಡರು ನನ್ನನ್ನು ಭೇಟಿ ಮಾಡಿ ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ಕೊಡುವ ನಿರ್ಣಯ ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿದೆ. ಮೈಸೂರು ಮಹಾರಾಜರು ಹಾಗೂ ವಿಶ್ವೇಶ್ವರಯ್ಯನವರ ಕಾಲದಲ್ಲಿ ಸ್ಥಾಪಿಸಲ್ಪಟ್ಟ ಮೈಸೂರು ಕಾರ್ಖಾನೆಗೆ ದೊಡ್ಡ ಇತಿಹಾಸವಿದೆ. ಅದು ಸರ್ಕಾರದ ಸ್ವಾಮ್ಯದಲ್ಲಿಯೇ ಇರಬೇಕು ಎನ್ನುವುದು ಎಲ್ಲರ ಅಭಿಲಾಷೆಯಾಗಿದೆ. ಆ ಹಿನ್ನೆಲೆ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ಕೊಡುವುದಕ್ಕೆ ಒಪ್ಪಿಗೆ ಕೊಡುವುದಿಲ್ಲ ಎನ್ನುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟಿದ್ದಾರೆ. ಅವರಿಗೆ ಮಂಡ್ಯ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮೈ ಶುಗರ್ ಕಾರ್ಖಾನೆಯನ್ನು ಗುತ್ತಿಗೆ ಕೊಡಬೇಕು ಎಂದು ಹಲವಾರು ವರ್ಷಗಳಿಂದ ಮಾತುಕತೆ ನಡೆಯುತ್ತಿದೆ. 40 ವರ್ಷ ಗುತ್ತಿಗೆ ಕೊಡಬೇಕು ಎನ್ನುವುದು ಸರ್ಕಾರದ ಮುಂದೆ ಇರುವ ಪ್ರಸ್ತಾವನೆ. ಯಾವುದೇ ಕಾರಣಕ್ಕೂ ಆ ಪ್ರಸ್ತಾವನೆಯನ್ನು ಅಂಗೀಕರಿಸಬಾರದು ಎಂದು ಮನವಿ ಸಲ್ಲಿಸಿದ್ದೇನೆ, ಇದಕ್ಕೆ ಸ್ಪಂದನೆ ಸಿಕ್ಕಿದೆ ಎಂದರು.
ಸುಮಲತಾ ವಿರುದ್ಧ ಹೆಚ್ಡಿಕೆ ಕಿಡಿ!
ಮಂಡ್ಯಕ್ಕೆ ಈಗಿರುವ ಸಂಸದರು ಹಿಂದೆ ಸಿಕ್ಕಿಲ್ಲ, ಮುಂದೆ ಸಿಗುವುದೂ ಇಲ್ಲ. ಮೊನ್ನೆ ನಡೆದ ಸಭೆಯಲ್ಲಿ ಇವರು ಮಾತನಾಡಿದ್ದನ್ನು ನೋಡಿದ್ದೇನೆ. ಕೆಆರ್ಎಸ್ ಅನ್ನು ಇವರೇ ರಕ್ಷಣೆ ಮಾಡುತ್ತಾರಂತೆ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದರು.
ಕೆಲಸ ಎಲ್ಲಿ ಮಾಡಬೇಕು ಎನ್ನುವ ಮಾಹಿತಿ ಇರದೆ, ಯಾರದ್ದೋ ವೈಯಕ್ತಿಕ ದ್ವೇಷದ ಮೇಲೆ ಹೇಳಿಕೆ ಕೊಡುವುದು ಬಹಳ ದಿನ ನಡೆಯಲ್ಲ. ಯಾವುದೋ ಅನುಕಂಪದಲ್ಲಿ ಗೆದ್ದು ಬಂದಿದ್ದಾರೆ. ಅದಕ್ಕಾಗಿ ಇವರು ಜನತೆಯ ಋಣ ತೀರಿಸುವ ಕೆಲಸ ಮಾಡಬೇಕು. ಪದೇಪದೆ ಅಂತಹ ಅವಕಾಶಗಳು ದೊರಕುವುದಿಲ್ಲ. ದೊರಕಿದ ಅನುಕಂಪವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಜನರೇ ಮುಂದೆ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿ.ಪಿ.ಯೋಗೇಶ್ವರ್ ವಿರುದ್ಧ ಕೆಂಡಾಮಂಡಲ
ಚನ್ನಪಟ್ಟಣ ಮೀಸಲಾತಿ ನಾನು ಹೇಳಿದಂತೆ ಆಗಿದೆ ಎಂದು ಯೋಗೇಶ್ವರ್ ಆರೋಪ ಮಾಡಿದ್ದಾರೆ. ಆದರೆ, ಮೀಸಲಾತಿ ಪ್ರಕಟ ಸರ್ಕಾರದಿಂದ ಆಗಿಲ್ಲ. ಚುನಾವಣಾ ಆಯೋಗ ಮಾಡಿದೆ. ಅದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಸಂಸ್ಥೆಯಾಗಿದೆ. ರಾಜ್ಯದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮೀಸಲಾತಿ ತೀರ್ಮಾನ ತೆಗೆದುಕೊಂಡಿರುವುದು ಚುನಾವಣಾ ಆಯೋಗ. ಒಬ್ಬ ಮಂತ್ರಿ ಈ ರೀತಿ ಬಾಲಿಶವಾದ ಹೇಳಿಕೆ ನೀಡಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದನ್ನು ಅವರೇ ತೀರ್ಮಾನಿಸಬೇಕು ಎಂದರು.
ಮೇಕೆದಾಟು ಜಲಾಶಯಕ್ಕೆ ಸಹಕರಿಸಿ
ಮೇಕೆದಾಟು ಯೋಜನೆ ಮಾಡಿ ನೀರು ಸಂಗ್ರಹಿಸಿದರೆ ತಮಿಳುನಾಡಿಗೆ ಕೊಡುವ ನೀರು ಕಡಿಮೆಯಾಗಲಿದೆ ಎನ್ನುವುದು ಸಿಎಂ ಸ್ಟಾಲಿನ್ಗೆ ಇರುವ ಆತಂಕ. ಮೇಕೆದಾಟಿನ ಬಳಿ ಜಲಾಶಯ ಕಟ್ಟಿದರೆ ಕೇವಲ ವಿದ್ಯುತ್ಚ್ಛಕ್ತಿ ಮಾತ್ರವಲ್ಲ, ನೀರು ಸಂಗ್ರಹ ಮಾಡುತ್ತಾರೆ.
ಈಗಾಗಲೇ ನ್ಯಾಯಾಧಿಕರಣ ತೀರ್ಪು ನೀಡಿದೆ. ನಾವು ತಮಿಳುನಾಡಿಗೆ ಕೊಡಬೇಕಿರುವ ನೀರನ್ನು ಪ್ರತಿವರ್ಷ ಕೊಡುವ ಜವಾಬ್ದಾರಿ ಕರ್ನಾಟಕದ ಮೇಲಿದೆ. ನಾವಿಬ್ಬರೂ ಅಣ್ಣ-ತಮ್ಮಂದಿರ ರೀತಿ ಇರಬೇಕು. ಇಲ್ಲಿ ಮಳೆಗಾಲದಲ್ಲಿ ಹೆಚ್ಚಿನ ನೀರು ಹರಿದು ಸಮುದ್ರದ ಪಾಲಾಗಲಿದೆ ಆ ನೀರನ್ನು ಸಂಗ್ರಹಿಸಿಕೊಳ್ಳಲು ಮಾತ್ರ ಜಲಾಶಯ ನಿರ್ಮಿಸಲಾಗುತ್ತದೆ. ಅವರಿಗೆ ಬೇಕಾದಾಗಲೂ ನೀರುಕೊಟ್ಟು ನಮ್ಮ ಭಾಗದ ಕೋಲಾರ-ಚಿಕ್ಕಬಳ್ಳಾಪುರ ಬೆಂಗಳೂರಿನ ನಾಗರಿಕರಿಗೆ ಕುಡಿಯುವ ನೀರನ್ನು ಬಳಸಿಕೊಳ್ಳಲು ಈ ಜಲಾಶಯ ಕಟ್ಟಲು ನಿರ್ಧರಿಸಲಾಗಿದೆ. ಇದು ನ್ಯಾಯಯುತವಾದ ಬೇಡಿಕೆಯಾಗಿದೆ ಎಂದು ಹೇಳಿದ್ರು.
ಈಗ ಹೊಗೇನಕಲ್ನಲ್ಲಿ ಅವರು ಯಾರು ಅನುಮತಿ ಪಡೆದು ಜಲಾಶಯ ಕಟ್ಟಿದ್ದಾರೆ ಯಾವುದಕ್ಕೆ ಬಳಕೆ ಮಾಡುತ್ತಿದ್ದಾರೆ? ಅವರು ಕೇಂದ್ರ ಸರ್ಕಾರದಿಂದ ಹಣ ಪಡೆದು ಕಟ್ಟಿದ್ದಾರೆ. ನಾವು ಮೇಕೆದಾಟಿನಲ್ಲಿ ಜಲಾಶಯ ನಿರ್ಮಾಣ ಮಾಡುತ್ತಿರುವುದು ನಮ್ಮ ರಾಜ್ಯದ ಹಣದಿಂದ. ಅವರಿಗೆ ನಮ್ಮಿಂದ ಕೊಡಬೇಕಾದ ನೀರನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ನ್ಯಾಯಾಧಿಕರಣದ ತೀರ್ಪನ್ನು ಉಲ್ಲಂಘನೆ ಮಾಡುವುದಿಲ್ಲ. ಆದರೆ ನೀವು ಕನ್ನಡಿಗರನ್ನು ನಮ್ಮ ಸಹೋದರರು ಎನ್ನುವ ಹೃದಯ ವೈಶಾಲ್ಯದಿಂದ ನೋಡಿ ಜಲಾಶಯ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿ. ಎರಡು ರಾಜ್ಯಗಳ ಸಂಬಂಧ ನಿರಂತರವಾಗಿ ಸೌಹಾರ್ದಯುತವಾಗಿ ಮುಂದುವರೆಯಲು ಸಹಕರಿಸಿ ಎಂದು ತಮಿಳುನಾಡಿನ ಸಿಎಂ ಸ್ಟಾಲಿನ್ಗೆ ಮನವಿ ಮಾಡಿದರು.