ಬೆಂಗಳೂರು : ನನಗೆ ಕಿರಿಯ ವಯಸ್ಸಿನಲ್ಲೇ ಸಭಾಧ್ಯಕ್ಷ ಸ್ಥಾನದ ಜವಾಬ್ದಾರಿ ಸಿಕ್ಕಿರುವುದು ನನ್ನ ಸೌಭಾಗ್ಯ. ಕ್ಷೇತ್ರದ ಜನರ ಆಶೀರ್ವಾದದಿಂದಾಗಿ ಈ ಹಂತ ತಲುಪಲು ಸಾಧ್ಯವಾಗಿದೆ. ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದ ಹಿರಿಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ನೂತನ ಸಭಾಧ್ಯಕ್ಷ ಯು ಟಿ ಖಾದರ್ ಹೇಳಿದ್ದಾರೆ. ಇಂದು ವಿಧಾನಸಭೆಯಲ್ಲಿ ಸಭಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಯು. ಟಿ. ಖಾದರ್ ಫರೀದ್ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ನೂತನ ಶಾಸಕರನ್ನು ಅಭಿನಂದಿಸಿದರು. ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮೈಸೂರು ಭಾಗದಲ್ಲಿ ಮೊದಲ ಬಾರಿಗೆ ಜಾರಿಗೆ ಬಂದಿದೆ. ಬ್ರಿಟಿಷರ ವಿರೋಧದ ನಡುವೆ ಮೈಸೂರು ಮಹಾರಾಜರು ಪ್ರಜಾಪ್ರಭುತ್ವವನ್ನು ಅನುಷ್ಠಾನಕ್ಕೆ ತಂದರು. ಇಂತಹ ವ್ಯವಸ್ಥೆಯೊಳಗೆ ಕಿರಿಯ ವಯಸ್ಸಿಗೆ ನನ್ನನ್ನು ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಸದನದ ಎಲ್ಲ ಸದಸ್ಯರಿಗೂ ಅಭಿನಂದನೆಗಳು ಎಂದರು.
ಕರಾವಳಿ ಭಾಗದ ವೈಕುಂಠ ಬಾಳಿಗ ಅವರು ಈ ಹಿಂದೆ ಸಭಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಭಾಧ್ಯಕ್ಷರಾಗಿ ಸದನದ ಘನತೆ ಹೆಚ್ಚಿಸಲು ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಜನಪ್ರತಿನಿಧಿಗಳು ನಾಡಿನ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು. ನಾಡಿನ ಜನರ ಶ‍್ರೇಯೋಭಿವೃದ್ಧಿಯೇ ನಮ್ಮ ಆದ್ಯತೆಯಾಗಿರಬೇಕು. ಎಲ್ಲಾ ವರ್ಗದವರ ಸಮಸ್ಯೆಗಳನ್ನು ಚರ್ಚಿಸುವ ಮೂಲಕ ಬೆಳಕು ಚೆಲ್ಲಬೇಕಿದೆ. ಪಕ್ಷ ಬೇಧವಿಲ್ಲದೆ ಎಲ್ಲಾ ಶಾಸಕರನ್ನು ಸಮಾನವಾಗಿ ಕಾಣುವುದು. ಸದನದ ಘನತೆ ಎತ್ತಿಹಿಡಿಯುವುದು ನನ್ನ ಜವಾಬ್ದಾರಿಯಾಗಿದೆ. ಕಲಾಪದಲ್ಲಿ ಮೌಲಿಕ ಚರ್ಚೆಗಳು ಹೆಚ್ಚಾಗಲಿ ಎಂದು ಯು ಟಿ ಖಾದರ್ ಆಶಿಸಿದರು.
ಮಹಾತ್ಮ ಗಾಂಧೀಜಿ, ಸಂವಿಧಾನಶಿಲ್ಪಿ ಬಿ ಆರ್ ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರು ಜನರ ದನಿಯಾಗಿ ಕೆಲಸ ಮಾಡಿದ್ದಾರೆ. ಅದೇ ರೀತಿ ಸಂವಿಧಾನದ ನಾಲ್ಕನೇ ಅಂಗವಾದ ಮಾಧ್ಯಮ ರಂಗ ಹಾಗೂ ಕಾರ್ಯಾಂಗ ಕೂಡ ಕೆಲಸ ಮಾಡುತ್ತಿದ್ದು, ರಾಜ್ಯದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಬಲಿಷ್ಠ ಕರ್ನಾಟಕವನ್ನು ನಿರ್ಮಾಣ ಮಾಡೋಣ ಎಂದು ಯು ಟಿ ಖಾದರ್ ಹೇಳಿದರು.
ನಂತರ ಮಾತು ಮುಂದುವರಿಸಿದ ಸ್ಪೀಕರ್, ಕಳೆದ ಮೂರು ದಿನಗಳ ಕಾಲ 7 ಗಂಟೆ 10 ನಿಮಿಷ ಸದನದ ಕಲಾಪ ನಡೆದಿದ್ದು, 223 ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಹೇಳಿದರು. ನಂತರ ರಾಷ್ಟ್ರಗೀತೆ ಹಾಡುವ ಮೂಲಕ ಸದನವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಯಿತು.
ಎರಡನೇ ಕಿರಿಯ ವಯಸ್ಸಿನ ಸ್ಪೀಕರ್ : ಇದಕ್ಕೂ ಮುನ್ನ ನೂತನವಾಗಿ ಆಯ್ಕೆಯಾದ ಸಭಾಧ್ಯಕ್ಷರ ಕುರಿತು ಮಾತನಾಡಿದ ಸಚಿವ ಡಾ. ಜಿ. ಪರಮೇಶ್ವರ್ ಅವರು, ಯು.ಟಿ ಖಾದರ್ ಅವರನ್ನು ಎರಡನೇ ಅತಿ ಚಿಕ್ಕ ವಯಸ್ಸಿನ ಸ್ಪೀಕರ್ ಎಂದು ಹೇಳಬಹುದು. ರಮೇಶ್ ಕುಮಾರ್ ಅವರು 1994ರಲ್ಲಿ ಸ್ಪೀಕರಾಗಿದ್ದಾಗ ಅವರ ವಯಸ್ಸು 43 ವರ್ಷ. ಈಗ ನೀವು ಕಿರಿಯ ಸ್ಪೀಕರ್ ಆಗಿದ್ದೀರಿ. ಯುವಕರಿಗೆ ಮಾದರಿಯಾಗಿ, ಆದರ್ಶವಾಗಿ ಇರುತ್ತೀರಿ ಎಂದು ಭಾವಿಸುತ್ತೇನೆ. ನಿಮಗೆ ಸವಾಲುಗಳು ಹೆಚ್ಚು ಇವೆ. ಪ್ರಥಮ ಬಾರಿಗೆ ಅಲ್ಪಸಂಖ್ಯಾತರೊಬ್ಬರು ಈ ಸ್ಥಾನವನ್ನು ಪ್ರತಿನಿಧಿಸುತ್ತಿದ್ದಾರೆ. ಇಡೀ ದೇಶ ನಿಮ್ಮನ್ನು ಗಮನಿಸುತ್ತದೆ ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಜಿ. ಟಿ. ದೇವೇಗೌಡ ಪ್ರತಿಕ್ರಿಯೆ :ಜೆಡಿಎಸ್‍ನ ಸದಸ್ಯ ಜಿ.ಟಿ. ದೇವೇಗೌಡ ಅವರು ಮಾತನಾಡಿ, 23ನೇ ಸಭಾಧ್ಯಕ್ಷರಾಗಿ ನೀವು ಆಯ್ಕೆಯಾಗಿದ್ದೀರಿ. ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ನಿಮ್ಮ ಆಯ್ಕೆಯನ್ನು ನೋಡಿ ಸಂತೋಷ ಪಟ್ಟಿದ್ದಾರೆ. ರಾಜ್ಯದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆಯಾಗಬೇಕು. ಸದನ ಚರ್ಚೆಯಾಗುವ ಎಲ್ಲಾ ವಿಚಾರಗಳಿಗೂ ಪರಿಹಾರ ಸಿಗುವಂತಾಗಬೇಕು ಎಂದು ಹೇಳಿದರು.