ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ನಾಳೆ ನಡೆಸಲಾಗುತ್ತಿರುವ ಬೃಹತ್ ಪ್ರತಿಭಟನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲ ವ್ಯಕ್ತಪಡಿಸಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಕುವೆಂಪು ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದ್ದು, ಅದಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಾಳೆ ಬಿಜೆಪಿಯೇತರ ರಾಜಕೀಯ ಪಕ್ಷಗಳು, ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಇದು ರಾಜ್ಯದ ಆರುವರೆ ಕೋಟಿ ಜನರಿಗೆ ಮಾಡಿರುವ ಅಪಮಾನ. ಅವರಿಗೆ ಮಾಡಿದ ಅಗೌರವ ಎಂದು ಟೀಕಿಸಿದ್ದಾರೆ.
ಕನ್ನಡಿಗರ ಅಸ್ಮಿತೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಾಗಾಗಿ ಎಲ್ಲಾ ಪ್ರಜ್ಞಾವಂತ ನಾಗರಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಪಠ್ಯ ತಿರುಚಿದವರ ವಿರುದ್ಧ ಧ್ವನಿ ಎತ್ತಬೇಕು. ರೋಹಿತ್ ಚಕ್ರತೀರ್ಥರ ವಿರುದ್ಧ ಮೊಕ್ಕದ್ದಮೆ ದಾಖಲಿಸಿ, ಬಂಧಿಸಬೇಕು. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.