ಬೆಂಗಳೂರು: ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಅವಕಾಶ ಕಲ್ಪಿಸಿದ ಹೈಕಮಾಂಡ್ ನಿರ್ಧಾರವನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ. ರಾಜ್ಯದಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಜೊತೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪಕ್ಷ ಬಲಪಡಿಸಲು ಶಕ್ತಿಮೀರಿ ಪ್ರಯತ್ನ ನಡೆಸುತ್ತೇನೆ, ಹೈಕಮಾಂಡ್ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದರು.
ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರ ಜೊತೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹೈಕಮಾಂಡ್ ನಾಯಕರು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಯಾವುದೇ ಸ್ಥಾನಮಾನ ಅಪೇಕ್ಷೆ ಪಡುವ ವ್ಯಕ್ತಿ ನಾನಲ್ಲ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಳಿಕ ನನ್ನದೊಂದು ಆಸೆ ಇತ್ತು. ಆ ಬಗ್ಗೆ ಪ್ರಧಾನಿ ಮೋದಿ ಜೊತೆ ಮಾತನಾಡಿದ್ದೆ. ಅವರು ದಕ್ಷಿಣ ಭಾರತ ಕಡೆ ಗಮನ ಕೊಡಬೇಕು ಎಂದಿದ್ದರು. ಅದರಂತೆ ಈಗ ಅವರು ನೀಡಿರುವ ಜವಾಬ್ದಾರಿಯನ್ನು ಅತ್ಯಂತ ವಿನಮ್ರತೆಯಿಂದ ಸ್ವೀಕರಿಸಿ ರಾಜ್ಯದ ಉದ್ದಗಲಕ್ಕೆ ಓಡಾಡಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಮತ್ತು ದಕ್ಷಿಣ ಭಾರತದ ಹಲವು ಕಡೆ ಪ್ರವಾಸ ಮಾಡಿ ಅಲ್ಲಿಯೂ ಪಕ್ಷ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.