ಬೆಂಗಳೂರು: ರಾಜ್ಯವು ಇಂದು ಒಬ್ಬ ರಾಷ್ಟ್ರೀಯ ಮಟ್ಟದ ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡಿದೆ. ಅತ್ಯಂತ ಹಿರಿಯ ಕಾಂಗ್ರೆಸ್ ನಾಯಕ ಗ್ರಾಮೀಣ ಭಾರತ ನಿರ್ಮಾಣದ ಕನಸು ಕಂಡು ಅದರ ಪ್ರತಿಬಿಂಬದ ರೀತಿ ಕಾರ್ಯನಿರ್ವಹಿಸಿದ್ದವರು ಕೇಂದ್ರದ ಮಾಜಿಸಚಿವ ಎಂ ವಿ ರಾಜಶೇಖರನ್. ದೀರ್ಘಕಾಲದ ಅನಾರೋಗ್ಯದಿಂದ ಬಳಲಿ ಇಂದು ಇಹಲೋಕ ತ್ಯಜಿಸಿದ್ದಾರೆ. 92ರ ಹಿರಿಯ ಜೀವ ಹಲವು ತಿಂಗಳಿಂದ ಅನಾರೋಗ್ಯದಿಂದ ಆಸ್ಪತ್ರೆ ವಾಸ ಅನುಭವಿಸಿತ್ತು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ನಗರದ ಬನ್ನೇರುಘಟ್ಟ ರಸ್ತೆಯ ಅಪೊಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.
ಮರಳವಾಡಿಯಲ್ಲಿ ಜನನ :1928ರ ಸೆ.12ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿಯಲ್ಲಿ ಜನಿಸಿದ್ದ ಎಂ ವಿ ರಾಜಶೇಖರನ್ ಕರ್ನಾಟಕದ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. 1947-48ರ ‘ಮೈಸೂರು ಚಲೋ ಚಳವಳಿ’ಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತಾವು ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಭಾರತದ ಸ್ವಾತಂತ್ರ್ಯ ಹೋರಾಟದ ಮೌಲ್ಯ ಮೈಗೂಡಿಸಿಕೊಂಡಿದ್ದರು.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ‘ಮಿತ್ರಮೇಳ’ ಎಂಬ ಸಾಂಸ್ಕೃತಿಕ ಸಂಘಟನೆ ಕಟ್ಟಿ ಬೆಳೆಸಿದ್ದರು. 1953ರಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕಾನೂನು ವ್ಯಾಸಂಗ ಮುಗಿಸುವ ಮುನ್ನವೇ ತಂದೆಯ ಅಕಾಲಿಕ ನಿಧನದಿಂದ ಊರಿಗೆ ವಾಪಸಾಗಬೇಕಾಗಿ ಬಂತು. ಬಳಿಕ ಕೃಷಿ ಕ್ಷೇತ್ರಕ್ಕೆ ಮರಳಿ ಪ್ರಗತಿಪರ ರೈತರೆನಿಸಿಕೊಂಡರು.
ರಾಜ್ಯದಲ್ಲಿ ಯೂತ್ ಕಾಂಗ್ರೆಸ್ ಬಲವರ್ಧನೆ :ಹೆಚ್ ಸಿ ದಾಸಪ್ಪ ಮತ್ತು ಯಶೋದರಮ್ಮ ದಾಸಪ್ಪನವರ ಮಧ್ಯಸ್ತಿಕೆಯಿಂದ ಕರ್ನಾಟಕದ ರೂವಾರಿ ಎಸ್ ನಿಜಲಿಂಗಪ್ಪನವರ ನಾಲ್ಕನೆಯ ಮಗಳು ಗಿರಿಜಾ ಅವರನ್ನು 1959ರಲ್ಲಿ ವಿವಾಹವಾದರು. ಅಖಿಲ ಭಾರತ ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಘಟಕದ ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಅವರದಾಯಿತು. ವಿಶೇಷವಾಗಿ ಯೂತ್ ಕಾಂಗ್ರೆಸ್ ರಾಜ್ಯದಲ್ಲಿ ಬಲಗೊಳ್ಳಲು ಅವರು ಕಾರಣಕರ್ತರಾಗಿದ್ದಾರೆ.