ಬೆಂಗಳೂರು: ಬಡವರು, ಜನ ಸಾಮಾನ್ಯರಿಗೆ ಸರಳ ವಿವಾಹವಾಗಲು ಅನುಕೂಲವಾಗುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಉಚಿತ ಸಾಮೂಹಿಕ ವಿವಾಹ ಆಯೋಜಿಸುವ ಮೂಲಕ ವಿನೂತನ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ.
ರಾಜ್ಯದ ಆಯ್ದ 100 ‘ಎ’ ದರ್ಜೆ ದೇಗುಲಗಳಲ್ಲಿ ಸರ್ಕಾರದ ವತಿಯಿಂದ ಪ್ರತೀ ವರ್ಷ 10 ಸಾವಿರಕ್ಕೂ ಅಧಿಕ ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಆಯೋಜಿಸಲು ರಾಜ್ಯ ಧಾರ್ಮಿಕ ಪರಿಷತ್ ಯೋಜಿಸಿದೆ. ಈ ಸಂಬಂಧ ಈಗಾಗಲೇ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಭೆಗಳನ್ನು ನಡೆಸಿದ್ದು, ಧಾರ್ಮಿಕ ಪರಿಷತ್ ಸಮಿತಿಗಳ ರಚನೆ ಬಳಿಕ ಈ ಯೋಜನೆ ಜಾರಿಗೆ ವೇಗ ನೀಡಲು ಚಿಂತನೆ ನಡೆಸಿದ್ದಾರೆ.
ಈ ಯೋಜನೆಯ ಅಂಗವಾಗಿ ವಧು ಮತ್ತು ವರನಿಗೆ ವಿವಾಹ ವಸ್ತ್ರ, ಎಂಟು ಗ್ರಾಂ ಚಿನ್ನದ ಮಾಂಗಲ್ಯ, ವಿವಾಹವಾದ ಜೋಡಿಗಳಿಗೆ ಆರ್ಥಿಕ ಸಹಾಯಧನ ನೀಡುವುದರ ಜೊತೆಗೆ ವಿವಾಹ ನೋಂದಣಿಯನ್ನು ಮಾಡಿಸಲು ಇಲಾಖೆ ತೀರ್ಮಾನಿಸಿದೆ. ನೂತನ ಯೋಜನೆಯನ್ನು 2020-21ರ ಆರ್ಥಿಕ ವರ್ಷದಿಂದ ಜಾರಿಗೊಳಿಸಲು ಮುಜರಾಯಿ ಇಲಾಖೆ ಚಿಂತನೆ ನಡೆಸಿದೆ.
ಪ್ರತಿ ಜೋಡಿ ವಿವಾಹಕ್ಕೆ ಅಂದಾಜು 25-30 ಸಾವಿರ ರೂ. ಖರ್ಚು ತಗಲುವ ಸಾಧ್ಯತೆ ಇದ್ದು,1000 ಜೋಡಿಗಳಿಗೆ ಅಂದಾಜು 2.5- 3 ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿದೆ. 10 ಸಾವಿರ ಜೋಡಿಗಳಿಗೆ 25-30 ಕೋಟಿ ರೂ. ವಾರ್ಷಿಕ ವೆಚ್ಚ ತಗಲುವ ಸಾಧ್ಯತೆ ಇದ್ದು, ವಿವಾಹ ಕಾರ್ಯಕ್ರಮ, ಊಟೋಪಚಾರ ಸೇರಿ ಸುಮಾರು 35 ಕೋಟಿ ರೂ. ಖರ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.