ಬೆಂಗಳೂರು: ಮಾಜಿ ಭೂಗತ ದೊರೆ ಇಂದು ಇಹಲೋಕ ತ್ಯಜಿಸಿದ್ದಾರೆ ಇವರ ಜೀವನ ಪಯಣ ಪ್ರತಿಯೊಬ್ಬರ ಎದೆಯನ್ನೂ ನಡುಗಿಸುವಷ್ಟು ದೊಡ್ಡದಾಗಿದೆ.
ಹೌದು.., ಭೂಗತ ಲೋಕವನ್ನೇ ಆಳುತ್ತಿದ್ದ ಮುತ್ತಪ್ಪ ರೈ ತಮ್ಮ ಭೂಗತ ಲೋಕದ ಸಂಪರ್ಕ ಬಿಟ್ಟು ಬಿಡದಿ ಬಳಿ ವಾಸವಾಗಿದ್ರು. ರೈ ಹಿನ್ನೆಲೆ ನೋಡೋದಾದ್ರೆ ಇವರ ಮೂಲ ಹೆಸರು ನೆಟ್ಟಾಳ ಮುತ್ತಪ್ಪ ಎಂದು. ಉದ್ಯಮಿಯಾಗಿಯೇ ಹೆಚ್ಚು ಚಿರಪರಿಚಿತರಾಗಿದ್ದರು. ಮೂಲತಃ ಪುತ್ತೂರಿನವರಾದ ಮುತ್ತಪ್ಪ ರೈ, ಮೇ. 1ರಂದು ಜನಿಸಿದ್ದರು. ತಂದೆ ನೆಟ್ಟಾಳ ನಾರಾಯಣ ರೈ ಹಾಗೂ ತಾಯಿ ಸುಶೀಲಾ ರೈ, ಪತ್ನಿ ರೇಖಾ ಮುತ್ತಪ್ಪ ರೈ ಹಾಗೂ ರಾಖಿ, ರಿಕ್ಕಿ ಎಂಬ ಇಬ್ಬರು ಮಕ್ಕಳ ಸಂಸಾರ ಇವರದು.
ಪತ್ನಿ ಸಾವು:
2013 ರಲ್ಲಿ ಮುತ್ತಪ್ಪ ರೈ ಪತ್ನಿ ರೇಖಾ ಎಲಿಜಬೆತ್ ಆಸ್ಪತ್ರೆಯಲ್ಲಿ ನಿಧನರಾದ್ರು. ತದ ನಂತರ ರೈ ಅನಿವಾರ್ಯವಾಗಿ ಎರಡನೇ ಮದುವೆಯಾದರು. ಕೇವಲ ಉದ್ಯಮಿ ಅಷ್ಟೇ ಅಲ್ಲದೆ ತುಳು ಚಿತ್ರದಲ್ಲೂ ಕಾಣಿಸಿಕೊಂಡಿದ್ದ ಮುತ್ತಪ್ಪ ರೈ, ಕಂಚಿಲ್ದ ಬಾಲೆ ಅನ್ನೋ ಸಿನಿಮಾದಲ್ಲಿ ನಟಿಸಿದ್ರು. ನಂತ್ರ ಜಯ ಕರ್ನಾಟಕ ಸಂಘಟನೆ ಹುಟ್ಟುಹಾಕಿದ್ದ ಇವರು, ಸಹಸ್ರಾರು ಜನರಿಗೆ ಸಂಘಟನೆ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ಕೇವಲ ಲಾಭಕ್ಕೋಸ್ಕರ ಕೆಲಸ ಮಾಡದೆ ಜನರಿಗೋಸ್ಕರ ಅಂತಲೇ ಜಯ ಕರ್ನಾಟಕ ಸಂಘಟನೆ ಶುರು ಮಾಡಲಾಗಿತ್ತು. ಮುತ್ತಪ್ಪ ರೈ ಸಿನಿಮಾ, ಉದ್ಯಮಿ, ಸಂಘಟನೆಯ ಅಧ್ಯಕ್ಷ್ಷ ಅನ್ನುವುದರ ಹೊರತಾಗಿಯೂ ಕ್ರಿಮಿನಲ್ ಪಟ್ಟಿಯಲ್ಲಿ ದಾಖಲೆ ಬರೆದಿದ್ದರು. ಕರ್ನಾಟಕ ಪೊಲೀಸರು ಮುತ್ತಪ್ಪ ರೈ ಮೇಲೆ 8 ಕೊಲೆ ಕೇಸ್ ಸಂಬಂಧ ವಾರೆಂಟ್ ಹೊರಡಿಸಿದ್ದರು. 2001ರಲ್ಲಿ ಉದ್ಯಮಿ ಸುಬ್ಬರಾಜು ಕೊಲೆ ಮಾಡಿದ್ದ ಕೇಸ್ ಕೂಡ ಮುತ್ತಪ್ಪ ರೈ ಮೇಲಿತ್ತು.