ಬೆಂಗಳೂರು: ಪೌರತ್ವ ಕಾಯ್ದೆ ಬಗ್ಗೆ ಮುಸ್ಲಿಂ ಸಮುದಾಯದವರಿಗೆ ಚಿಂತೆಯೇ ಇಲ್ಲ. ಸ್ವಾತಂತ್ರ ಹೋರಾಟವನ್ನು ಮುಸ್ಲಿಮರೇ ಶುರು ಮಾಡಿದ್ದರು. ಈಗಲೂ ಸಿಎಎ ಹೋರಾಟವನ್ನು ಮುಸ್ಲಿಮರೇ ಶುರು ಮಾಡಿದ್ದಾರೆ ಎಂದು ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನ್ಯಾಯಾಂಗ ತನಿಖೆಗೆ ಆದೇಶ ಮಾಡದೇ ಹೋದರೆ ಇದೇ ಡಿ.28 ರಿಂದ ಕಾಂಗ್ರೆಸ್ ಹೋರಾಟ ಮಾಡಲಿದೆ. ಬೊಮ್ಮಾಯಿ, ಯಡಿಯೂರಪ್ಪ ಸುಖಾಸುಮ್ಮನೆ ಹೇಳಿಕೆ ಕೊಟ್ಟು ಕೆಡಿಸಿಕೊಳ್ಳುವುದು ಬೇಡ. ನ್ಯಾಯಾಂಗ ತನಿಖೆಗೆ ಕೊಡಿ. ಸತ್ಯಾಂಶ ಹೊರಬರಲಿ, ಇಲ್ಲವಾದರೆ ದೊಡ್ಡ ಸಂಕಟ ಎದುರಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪೌರತ್ವ ಕಾಯ್ದೆ ಕುರಿತು ಸಿ.ಎಂ.ಇಬ್ರಾಹಿಂ ಹೇಳಿಕೆ ಸಿಎಎ ಹೋರಾಟ ಎನ್ನುವುದು ಜಾತಿ ಧರ್ಮದ ಹೋರಾಟವಲ್ಲ. ಇದು ಅಂಬೇಡ್ಕರ್ ಅವರ ಸಂವಿಧಾನವನ್ನು ಉಳಿಸುವ ಹೋರಾಟ. ಎರಡು ವರ್ಷದ ಹಿಂದೆಯೇ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಿಸುತ್ತೇವೆ ಎಂದಿದ್ದಾರೆ. ಜಾರ್ಖಂಡ್‌ನಲ್ಲಿ ಬಿಜೆಪಿ ಸೋತಿದೆ. ಕರ್ನಾಟಕದಲ್ಲಿ ಅದೃಷ್ಟದಿಂದ ಯಡಿಯೂರಪ್ಪಗೆ ಅಧಿಕಾರ ಸಿಕ್ಕಿದೆ. ನಿಮ್ಮ ಮೇಲೆ ಜನರಿಗೆ ಮೃದು ಧೋರಣೆ ಇದೆ. ಆದರೆ ಮೋದಿ, ಅಮಿತ್ ಶಾ ಮೇಲೆ ಸಿಟ್ಟಿದೆ. ಹೀಗಾಗಿ ವಿನಾಕಾರಣ ಹೇಳಿಕೆ ಕೊಡಬೇಡಿ. ಜನ ನಿಮಗೆ ಅವಕಾಶ ಕೊಟ್ಟಿದ್ದಾರೆ. ಆ ಸುವರ್ಣವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.
ಎನ್ ಆರ್ ಸಿಯನ್ನು ರಾಜ್ಯದಲ್ಲಿ ಜಾರಿ ಮಾಡಬೇಡಿ. ಈಗಾಗಲೇ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಸಿಎಂ, ಬಿಹಾರ ಸಿಎಂ ಸೇರಿ ಎನ್ಡಿಎ ಮೈತ್ರಿಕೂಟದವರು ಇದನ್ನು ಜಾರಿ ಮಾಡಲ್ಲ ಎಂದಿದ್ದಾರೆ. ನೀವು ರಾಜ್ಯದಲ್ಲಿ ಇದನ್ನು ಜಾರಿ ಮಾಡಬೇಡಿ ಎಂದು ಆಗ್ರಹಿಸಿದರು.
ಕಲ್ಲುಹೊಡೆದ ಮೇಲೆ ಗೋಲಿಬಾರ್ ಆಗಿದೆಯೋ, ಗುಂಡು ಹೊಡೆದ ನಂತರ ಕಲ್ಲು ಹೊಡೆದರೋ? ಎನ್ನುವುದು ತನಿಖೆಯಿಂದ ಗೊತ್ತಾಗುತ್ತದೆ. ನ್ಯಾಯಾಂಗ ತನಿಖೆಯಿಂದಷ್ಟೇ ಇದೆಲ್ಲ ಸತ್ಯಾಂಶ ಹೊರಬರಬೇಕು ಎಂದು ತಿಳಿಸಿದರು.