ಬೆಂಗಳೂರು: ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಆಯ್ಕೆಗೆ ಸಂಬಂಧಿಸಿದ ಶೋಧನಾ ಸಮಿತಿಯು 2020ರ ಸೆಪ್ಟೆಂಬರ್ 29ರಂದು ನಡೆಸಿರುವ ಸಭೆಯ ನಡಾವಳಿ ಹಾಗೂ ಇತರ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಸಂಗೀತ ವಿವಿಗೆ ಡಾ. ನಾಗೇಶ್ ಬೆಟ್ಟಕೋಟೆ ಅವರನ್ನು ಕುಲಪತಿಯಾಗಿ ನೇಮಕ ಮಾಡಿರುವ ಆದೇಶ ರದ್ದು ಕೋರಿ ಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ಹಾಗೂ ಸರ್ಕಾರದ ಪರ ವಕೀಲರ ವಾದ ಆಲಿಸಿದ ಪೀಠ, ಕುಲಪತಿ ಆಯ್ಕೆಗೆ ಶೋಧನಾ ಸಮಿತಿ 2020ರ ಸೆಪ್ಟೆಂಬರ್ 29ರಂದು ನಡೆಸಿದ ಸಭೆಯ ನಡಾವಳಿಗಳು ಹಾಗೂ ಇತರ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು.