ಬೆಂಗಳೂರು:ಪೇಜಾವರ ಶ್ರೀಗಳ ವಿರುದ್ಧದ ಅವಹೇಳನಕಾರಿ ಹೇಳಿಕೆ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಗೆ ನಾದಬ್ರಹ್ಮ ಸಂಗೀತ ನಿರ್ದೇಶಕ ಹಂಸಲೇಖ ಅರ್ಧ ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ.
ಪೊಲೀಸರ ಮುಂದೆ ಹಂಸಲೇಖ ಕಣ್ಣೀರು:
ಬಸವನಗುಡಿ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ರಮೇಶ್, ಅರ್ಧ ಗಂಟೆ ಕಾಲ ವಿಚಾರಣೆ ನಡೆಸಿದರು. ಅವಹೇಳನಕಾರಿ ಹೇಳಿಕೆ ವಿಚಾರ ಸಂಬಂಧ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ಹಂಸಲೇಖ, ಯಾಕೆ ಹಾಗೆ ಹೇಳಿದೆನೋ ಗೊತ್ತಾಗಿಲ್ಲ. ಹೇಳಿಕೆ ಹಿಂದೆ ದುರುದ್ದೇಶ ಇರಲಿಲ್ಲ. ಮಾತನಾಡುವ ಭರದಲ್ಲಿ ಹಾಗೆ ಹೇಳಿಬಿಟ್ಟಿದ್ದೇನೆ. ನನ್ನ ಹೇಳಿಕೆಗೆ ನನ್ನ ಹೆಂಡತಿಯೇ ಬೇಸರ ವ್ಯಕ್ತಪಡಿಸಿದ್ದಾರೆ. 70 ವರ್ಷದ ಜೀವನದಲ್ಲಿ ಎಂದಿಗೂ ಹೀಗೆ ಮಾಡಿಕೊಂಡಿರಲಿಲ್ಲ, ತನ್ನ ಹೇಳಿಕೆಯಿಂದ ತಪ್ಪಾಗಿದೆ. ಯಾವ ಧರ್ಮ, ಜಾತಿಯನ್ನು ನಿಂದಿಸುವ ಉದ್ದೇಶ ಇರಲಿಲ್ಲ. ಈ ಘಟನೆಯಿಂದ ತನಗೆ ತುಂಬಾ ನೋವಾಗಿದೆ. ತನ್ನ ಕೆಲಸದಲ್ಲಿಯೂ ತನಗೆ ಸೆಟ್ ಬ್ಯಾಕ್ ಆಗಿದೆ. ನಾನು ಈ ಘಟನೆಯಿಂದ ತುಂಬಾ ನೋವು ಅನುಭವಿಸಿದ್ದೇನೆ ಎಂದು ತನಿಖಾಧಿಕಾರಿ ಮುಂದೆ ಕಣ್ಣೀರು ಹಾಕಿ ಹಂಸಲೇಖ ಗದ್ಗದಿತರಾದರು ಎಂದು ತಿಳಿದು ಬಂದಿದೆ.
ಹಂಸಲೇಖ ಪರ ವಕೀಲ ದ್ವಾರಕನಾಥ್ ಮಾತನಾಡಿ ಇಂದು ವಿಚಾರಣೆ ನಡೆದಿದೆ. ಯಾವತ್ತು ಬರಬೇಕೆಂದು ಹೇಳಿದಾಗ ಮತ್ತೆ ಬರಬೇಕಿದೆ. ವಿಚಾರಣೆ ಅವಶ್ಯಕತೆ ಇದ್ರೆ ಕರೆಸುತ್ತೇವೆ ಎಂದು ಹೇಳಿದ್ದಾರೆ. ನಾವು ಕಾನೂನು ಮುಖಾಂತರ ಹೋರಾಟ ಮಾಡುತ್ತೇವೆ ಎಂದರು. ಅಗತ್ಯಬಿದ್ದರೆ ಮತ್ತೆ ವಿಚಾರಣೆಗೆ ಕರೆದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿ ಕಳುಹಿಸಿದ್ದಾರೆ ಎಂದರು.
ಇದಕ್ಕೂ ಮುನ್ನ ಹಂಸಲೇಖ ಪರವಾಗಿ ನಟ ಚೇತನ್ ಠಾಣೆಗೆ ಬಂದಿರುವುದನ್ನು ಬಜರಂಗದಳದ ಕಾರ್ಯಕರ್ತರು ವಿರೋಧಿಸಿ ಕಪ್ಪು ಬಾವುಟ ಪ್ರದರ್ಶಿಸಿದರು. ಭಾರತೀಯ ಪ್ರಜೆಯಲ್ಲದ ಹಾಗೂ ಪ್ರಕರಣಕ್ಕೆ ಸಂಬಂಧಿಸದ ವ್ಯಕ್ತಿಯು ಬರಕೂಡದಂತೆ ಘೋಷಿಸಿದರು. ಠಾಣೆಯೊಳಗೆ ಬರದಂತೆ ತಡೆದರು. ಮತ್ತೊಂದೆಡೆ ಚೇತನ್ ಪರವಾಗಿ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು. ಈ ವೇಳೆ ಎರಡು ಸಂಘಟನೆಗಳ ನಡುವೆ ತಿಕ್ಕಾಟ ನಡೆದು ಮಾತಿನ ಸಂಘರ್ಷಕ್ಕೂ ಕಾರಣವಾಯಿತು. ಕೆಲ ಕಾಲ ಹೈಡ್ರಾಮ ನಡೆಯಿತು.
ಪೊಲೀಸ್ ಠಾಣೆ ಹೊರಗೆ ಪ್ರತಿಭಟನೆ ಈ ವೇಳೆ ಪ್ರತಿಭಟನೆ ನಡೆಸಿದ ಚೇತನ್, ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಎಲ್ಲರಿಗೂ ಮಾತನಾಡುವ ಹಾಗೂ ಅಭಿಪ್ರಾಯ ವ್ಯಕ್ತಪಡಿಸುವ ವಾಕ್ ಸ್ವಾತಂತ್ರ್ಯ ಇದೆ. ಪೇಜಾವರ ಶ್ರೀಗಳ ವಿಚಾರದಲ್ಲಿ ಹಂಸಲೇಖ ಅವರು ಕ್ಷಮೆ ಕೇಳಿದರೂ ಮತ್ತೆ ತಗಾದೆ ತೆಗೆದಿರುವುದು ಸರಿಯಲ್ಲ ಆಕ್ರೋಶ ವ್ಯಕ್ತಪಡಿಸಿದರು.