ಬೆಂಗಳೂರು: ಬೆಂಗಳೂರು ಕಂಬಳ - ನಮ್ಮ ಕಂಬಳಕ್ಕೆ ದಕ್ಷಿಣ ಕನ್ನಡದ ನಂಟು ಇರುವ ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿದೆ. ಇದು ಯಾವುದೇ ಕಮರ್ಷಿಯಲ್ ಅಗ್ರಿಮೆಂಟ್ ಅಲ್ಲ. ಆದರೆ ಕಾರ್ಯಕ್ರಮಕ್ಕೆ ಎಲ್ಲರ ಬೆಂಬಲವಿದೆ ಎಂದು ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ತಿಳಿಸಿದರು.
ಕನ್ನಡ ಸಿನಿಮಾರಂಗದ ಎಲ್ಲರಿಗೂ ಆಮಂತ್ರಣ ನೀಡಲಾಗಿದ್ದು, ಎಲ್ಲರೂ ಬರುವ ನಿರೀಕ್ಷೆಯಿದೆ. ಶಿವಣ್ಣ ಹಾಗೂ ಅವರ ಪತ್ನಿ ಬರುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಯುವ ಬರುತ್ತಿದ್ದಾರೆ. ಸುದೀಪ್ ಅವರು ಶನಿವಾರ ಬಿಗ್ಬಾಸ್ ಶೂಟಿಂಗ್ನ ನಡುವೆ ಬಿಡುವು ಮಾಡಿಕೊಂಡು ಬರುವುದಾಗಿ ತಿಳಿಸಿದ್ದಾರೆ. ಯಶ್ ಸದ್ಯಕ್ಕೆ ಊರಿನಲ್ಲಿಲ್ಲ. ಉಪೇಂದ್ರ ಹಾಗೂ ಅವರ ಪತ್ನಿ ಬರುತ್ತಿದ್ದಾರೆ. ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಬರುವುದಾಗಿ ತಿಳಿಸಿದ್ದಾರೆ. ಜೂನಿಯರ್ ಎನ್.ಟಿ.ಆರ್ ಅವರನ್ನ ಆಹ್ವಾನಿಸಿದ್ದೇವೆ, ಆ ದಿನ ಶೂಟಿಂಗ್ ಇದೆ ಎಂದಿದ್ದಾರೆ ಎಂದು ಮಾಹಿತಿ ನೀಡಿದರು.
ಇದರಲ್ಲಿ ರಾಜಕೀಯವಿಲ್ಲ, ಜಾತಿಯಿಲ್ಲ, ಭಾಷೆ ವಿಚಾರವೆಂದಾಗ ಕುಂದಾಪುರ, ಮಂಜೇಶ್ವರದಲ್ಲಿಯೂ ಕಂಬಳ ನಡೆಯುತ್ತದೆ. ಮಂಗಳೂರು ಮೂಲದ ಎಲ್ಲ ಸಂಘಟನೆಗಳು ಒಗ್ಗಟ್ಟಿನಿಂದ ಮುಂದೆ ಬಂದಿರುವುದು ವಿಶೇಷ. ಕಂಬಳ ನಮ್ಮ ಪುರಾತನ ಕಾಲದಿಂದ ಬಂದಿರುವುದು. ಕಾಂತಾರ ಸಿನಿಮಾ ಬಂದ ಬಳಿಕ ನಮ್ಮ ಸಂಸ್ಕೃತಿಯನ್ನ ಜಗತ್ತು ನೋಡಿ ಒಪ್ಪಿದೆ. ತುಂಬಾ ಜನ ಕಂಬಳ ನೋಡಿರುವುದಿಲ್ಲ. ನಾವೇ ಎಷ್ಟೋ ಬಾರಿ ಕಂಬಳದ ಸಂದರ್ಭದಲ್ಲಿ ಊರಿಗೆ ಹೋಗಲು ಸಾಧ್ಯವಾಗುವುದಿಲ್ಲ. ಅಂಥವರಿಗಾಗಿ ಈ ಅವಕಾಶ. ಹಾಗೂ ಇಲ್ಲಿ ಕಂಬಳ ಮಾತ್ರವಲ್ಲ ದಕ್ಷಿಣ ಕನ್ನಡ ಭಾಗದ ಸಂಸ್ಕೃತಿಯ ಅನಾವರಣವಿದೆ. ದಕ್ಷಿಣ ಕನ್ನಡ ಭಾಗದ ಹಳೆಯ ವಸ್ತುಗಳ ಪ್ರದರ್ಶನ, ಆಹಾರ ಮೇಳವಿದೆ. ಕಂಬಳಕ್ಕೆ ಬಂದವರಿಗೆ ದಕ್ಷಿಣ ಕನ್ನಡಕ್ಕೆ ಬಂದು ಹೋದ ಅನುಭವವಾಗಬೇಕು ಎಂಬುದು ನಮ್ಮ ಆಸೆ ಎಂದು ಇದೇ ಸಂದರ್ಭದಲ್ಲಿ ಗುರುಕಿರಣ್ ತಿಳಿಸಿದರು.