ಕರ್ನಾಟಕ

karnataka

ETV Bharat / state

ಜಿಮ್​ನಲ್ಲಿನ ಪ್ರಸ್ತಾವಿತ ಹೂಡಿಕೆ ಯೋಜನೆಗಳ ತ್ವರಿತ ಜಾರಿಗೆ ಸಮನ್ವಯ ಸಮಿತಿ ರಚನೆ: ಸಚಿವ ನಿರಾಣಿ - ಹೂಡಿಕೆ ಯೋಜನೆ ಬಗ್ಗೆ ಮುರುಗೇಶ್​ ನಿರಾಣಿ ಪ್ರತಿಕ್ರಿಯೆ

ಹಸಿರು ಇಂಧನ ಕ್ಷೇತ್ರದ ಹೂಡಿಕೆ ಮೊತ್ತವು 6,14,483 ಕೋಟಿ ರೂ.ಗಳಾಗಿದ್ದು, ಕಬ್ಬಿಣ, ಸಿಮೆಂಟ್, ಸರಕು ಸಾಗಣೆ, ಇ-ವಾಹನ, ಆಹಾರ ಸಂಸ್ಕರಣೆ ಮುಂತಾದ ವಲಯಗಳಿಗೂ ಹೂಡಿಕೆದಾರರು ಆಸಕ್ತಿ ತೋರಿಸಿದ್ದಾರೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

KN_BNG
ಮುರುಗೇಶ್​ ನಿರಾಣಿ

By

Published : Nov 5, 2022, 9:04 PM IST

ಬೆಂಗಳೂರು: ಅನುಮೋದಿತ ಯೋಜನೆಗಳ ತ್ವರಿತ ಜಾರಿ, ಒಪ್ಪಂದ ಏರ್ಪಟ್ಟ ಇನ್ನುಳಿದ ಹೂಡಿಕೆಗಳ ಯೋಜನಾ ಪ್ರಸ್ತಾವನೆಗಳಿಗೆ ಮೂರು ತಿಂಗಳಲ್ಲಿ ಅನುಮೋದನೆ ವ್ಯವಸ್ಥೆಗೆ ಸಮನ್ವಯ ಸಮಿತಿ ರಚಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಸಮಿತಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಇಲಾಖೆ, ಸರ್ಕಾರ ಮತ್ತು ಉದ್ಯಮಗಳ ಮಧ್ಯೆ ಸಮನ್ವಯ ಸಾಧಿಸಿ ಅಗತ್ಯತೆಗಳನ್ನು ಪೂರೈಸುವ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.

ಈ ಬಾರಿಯ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಹಸಿರು ಇಂಧನ ವಲಯಕ್ಕೆ ಹೂಡಿಕೆದಾರರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅನುಮೋದಿತ, ಒಡಂಬಡಿಕೆ ಏರ್ಪಟ್ಟ, ಭರವಸೆ ನೀಡಿದ ಒಟ್ಟು 667 ಹೂಡಿಕೆಗಳು, 9,81,784 ಲಕ್ಷ ಕೋಟಿ ರೂ. ಮೊತ್ತದಲ್ಲಿ ಶೇ.71ರಷ್ಟು ಹಸಿರು ಇಂಧನ ವಲಯಕ್ಕೆ ಸಂದಿದೆ.

ಹಸಿರು ಇಂಧನ ಕ್ಷೇತ್ರದ ಒಟ್ಟು 105 ಹೂಡಿಕೆಗಳ ಮೊತ್ತವು 6,14,483 ಕೋಟಿ ರೂ.ಗಳಾಗಿದ್ದು, ಕಬ್ಬಿಣ, ಸಿಮೆಂಟ್, ಸರಕು ಸಾಗಣೆ, ಇ-ವಾಹನ, ಆಹಾರ ಸಂಸ್ಕರಣೆ ಮುಂತಾದ ವಲಯಗಳಿಗೂ ಹೂಡಿಕೆದಾರರು ಆಸಕ್ತಿ ತೋರಿಸಿದ್ದಾರೆ ಎಂದರು.

ಹಿಂದಿನ ಸಮಾವೇಶಗಳ ಅನುಭವದಿಂದ ಪಾಠ ಕಲಿತಿದ್ದೇವೆ. ಒಟ್ಟು ಹೂಡಿಕೆಗಳಲ್ಲಿ ಶೇ.70ರಷ್ಟು ಯೋಜನೆಗಳು ಕಾರ್ಯಗತವಾಗಬೇಕು ಎಂಬ ನಿಲುವಿಗೆ ಬದ್ಧವಾಗಿದ್ದು, ಹೂಡಿಕೆಗೆ ಮುಂದೆ ಬಂದವರೆಲ್ಲರ ಜತೆಗೆ ಈ ಬಾರಿ ಒಡಂಬಡಿಕೆ ಮಾಡಿಕೊಂಡಿಲ್ಲ. ಹೂಡಿಕೆದಾರರು ಸಿದ್ಧತೆ, ಉದ್ದೇಶಿತ ಯೋಜನೆಗಳ ಅನುಷ್ಠಾನಕ್ಕೆ ಮಾಡಿಕೊಂಡ ಸಿದ್ಧತೆ ಸೇರಿ ಎಷ್ಟು ಗಂಭೀರವಾಗಿದ್ದಾರೆ ಎನ್ನುವುದು ಅರಿತು ಒಡಂಬಡಿಕೆ, ಅನುಮೋದನೆ ನೀಡಲಾಗಿದೆ ಎಂದು ನಿರಾಣಿ ಸ್ಪಷ್ಟಪಡಿಸಿದರು.

ಸಮಾವೇಶದಲ್ಲಿ ಅದಾನಿ ಸಮೂಹದವರು ಸಿಮೆಂಟ್, ವಿದ್ಯುತ್, ನಗರಗಳಿಗೆ ಕೊಳವೆ ಮಾರ್ಗದಲ್ಲಿ ಅನಿಲ ಪೂರೈಕೆ, ಸಾರಿಗೆ, ಖಾದ್ಯತೈಲ ಮುಂತಾದವುಗಳಿಗೆ ಒಂದು ಲಕ್ಷ ಕೋಟಿ ರೂ.ಗಳ ಹೂಡಿಕೆ ಘೋಷಿಸಿದ್ದರು. ಜೆಎಸ್‌ಡಬ್ಲ್ಯು ಸಮೂಹವು ಸ್ಟೀಲ್ ಪ್ಲ್ಯಾಂಟ್ ಸಾಮರ್ಥ್ಯ ವಿಸ್ತರಣೆ, ಸಿಮೆಂಟ್, ಹಸಿರು ಇಂಧನ, ಬಂದರು ಮುಂತಾದವುಗಳಿಗೆ 57 ಸಾವಿರ ಕೋಟಿ ರೂ. ಘೋಷಿಸಿತ್ತು. ಒಟ್ಟಾರೆ ಘೋಷಿತ 1.57 ಲಕ್ಷ ಕೋಟಿ ರೂ.ಗಳ 40 ಸಾವಿರ ಕೋಟಿ ರೂ.ಗಳ ಹೂಡಿಕೆಗೆ ಸಮಾವೇಶದ ನಂತರ ಒಡಂಬಡಿಕೆಯಾಗಿದೆ ಎಂದು ತಿಳಿಸಿದರು.

ರಷ್ಯಾ-ಉಕ್ರೇನ್ ಯುದ್ಧದಿಂದ ಹಸಿರು ಇಂಧನಕ್ಕೆ ಹೆಚ್ಚಿನ ಗಮನ:ರಷ್ಯಾ - ಉಕ್ರೇನ್ ಯುದ್ಧದ ಪರಿಣಾಮ ಜಾಗತಿಕವಾಗಿ ಕಚ್ಚಾತೈಲ, ಅನಿಲ, ವಿದ್ಯುತ್ ಬಿಕ್ಕಟ್ಟು ತಲೆದೋರಿ ಪರ್ಯಾಯ ಮೂಲಗಳತ್ತ ವಿಶ್ವದ ಅನೇಕ ರಾಷ್ಟ್ರಗಳು ಗಮನಹರಿಸಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ ತಿಳಿಸಿದರು. ಹೀಗಾಗಿ ಈ ಬಾರಿ ಗ್ರೀನ್ ಹೈಡ್ರೋಜನ್, ಗ್ರೀನ್ ಅಮೋನಿಯಾ ಆಧಾರಿತ ವಿದ್ಯುತ್ ಉತ್ಪಾದನೆ, ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಹೂಡಿಕೆದಾರರು ಪ್ರಾಮುಖ್ಯತೆ ನೀಡಿದ್ದಾರೆ ಎಂದರು.

ಹೂಡಿಕೆ ವಿವರ ಏನಿದೆ:ಒಡಂಬಡಿಕೆ ಅನುಮೋದಿತ ಹೂಡಿಕೆಗಳು : 608, ಮೊತ್ತ: 2,83,415 ಕೋಟಿ ರೂ.
ಒಪ್ಪಂದವೇರ್ಪಟ್ಟ ಹೂಡಿಕೆಗಳು: 57, ಮೊತ್ತ: 5,41,369 ಕೋಟಿ ರೂ.
ಜಿಮ್‌ನಲ್ಲಿ ಘೋಷಿತ ಹೂಡಿಕೆಗಳು: 2, ಮೊತ್ತ: 1,57,000 ಕೋಟಿ ರೂ.
ಒಟ್ಟು- 667 ಹೂಡಿಕೆ ಯೋಜನೆಗಳು, ಮೊತ್ತ: 9,81,784 ಕೋಟಿ ರೂ.

ವಲಯವಾರು ಹೂಡಿಕೆ ಪ್ರಮಾಣ:ನವೀಕರಿಸಬಹುದಾದ ಇಂಧನ ಶೇ.38, ಜಲಜನಕ ಮತ್ತು ಅದರ ಉತ್ಪನ್ನಗಳು ಶೇ.33, ಪ್ರವರ್ಧಮಾನದ ತಯಾರಿಕಾ ವಲಯ, ಮೂಲ ಸವಲತ್ತು, ಸರಕು ಸಾಗಣೆ ಪಾರ್ಕ್ ತಲಾ ಶೇ.9, ಹಸಿರು ಇಂಧನ 105 ಹೂಡಿಕೆಗಳಾಗಿವೆ. ತಯಾರಿಕೆ ವಲಯ (ನವೋದ್ಯಮ, ಡ್ರೋನ್, ಆಹಾರ ಸಂಸ್ಕರಣೆ, ದತ್ತಾಂಶ ಕೇಂದ್ರ, ಇ-ವಾಹನಗಳು ಇತ್ಯಾದಿ ಪ್ರವರ್ಧನಮಾನದ ಉದ್ಯಮಗಳು): 53 ಹೂಡಿಕೆಗಳಾಗಿವೆ. ಮೂಲ ಸವಲತ್ತು, ಸರಕು ಸಾಗಣೆ ಪಾಕ್, ಟೆಲೆಕಾಮ್, ವಿಮಾನ ನಿಲ್ದಾಣ ಇತ್ಯಾದಿಗಳಿಗೆ 69 ಹೂಡಿಕೆಗಳಾಗಿವೆ.

ಕಬ್ಬಿಣ ಮತ್ತು ಸ್ಟೀಲ್, ಗಣಿಗಾರಿಕೆ, ಸಿಮೆಂಟ್ ಮುಂತಾದವುಗಳಿಗೆ 26 ಹೂಡಿಕೆಗಳಾಗಿದ್ದರೆ, ಸಕ್ಕರೆ, ಜವಳಿ, ದಿನ ಬಳಕೆ ವಸ್ತುಗಳು ಇತ್ಯಾದಿಗಳಿಗೆ ಆದ ಹೂಡಿಕೆಗಳು 412.

ಇದನ್ನೂ ಓದಿ:ಹಿಂದಿನ ಹೂಡಿಕೆ ಸಮಾವೇಶದ ಅನುಷ್ಠಾನದ ಪ್ರಮಾಣ ಶೇ.15, ಇದು ಪುನರಾವರ್ತನೆ ಆಗಬಾರದು: ಸಿಎಂ ಸೂಚನೆ..!

ABOUT THE AUTHOR

...view details