ಬೆಂಗಳೂರು: ಈ ಬಾರಿ 10 ಲಕ್ಷ ಕೋಟಿಗೂ ಹೆಚ್ಚಿನ ಹೂಡಿಕೆಗೆ ಒಡಂಬಡಿಕೆಯಾಗಿದ್ದು, ಶೇ.70 ರಷ್ಟು ಹೂಡಿಕೆ ಬೆಂಗಳೂರು ಹೊರಗೆ ಮಾಡಲು ಒಡಂಬಡಿಕೆ ಆಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಒಡಂಬಡಿಕೆ ಮಾಡಿಕೊಂಡಿರುವವರಿಗೆ ಅಗತ್ಯ ಸೌಲಭ್ಯ, ಸೌಕರ್ಯ ಕಲ್ಪಿಸಲು ನಾವು ಬದ್ದವಾಗಿದ್ದೇವೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಅರಮನೆ ಆವರಣದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಕೆಲಸದ ಒತ್ತಡ ಇದ್ದರೂ ವರ್ಚುಯಲ್ ಮೂಲಕ ಮಾತನಾಡಿದರು, ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯೆಲ್, ಪ್ರಹ್ಲಾದ್ ಜೋಶಿ, ಸಿಎಂ ಬೊಮ್ಮಾಯಿ ಅವರಿಗೆ ಧನ್ಯವಾದ ಹೇಳಿದರು.
ಕರ್ನಾಟಕ, ಕೈಗಾರಿಕೆಗಳಿಗೆ ಆದ್ಯತೆ ನೀಡುತ್ತಾ ಬಂದಿದೆ, ಮೈಸೂರು ಮಹಾರಾಜರ ಕಾಲ, ವಿಶ್ವೇಶ್ವರಯ್ಯ ಕೈಗಾರಿಕೆಗೆ ಫೌಂಡೇಷನ್ ಹಾಕಿ ಅಂದೇ ಆತ್ಮ ನಿರ್ಭರ ಮಾಡಿದ್ದರು. ಹಾಗಾಗಿ ವಿವಿಧ ವಲಯದಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಸೇವಾ ವಲಯ, ಉತ್ಪಾದನಾ ವಲಯದಲ್ಲಿ ಮುಂದಿದ್ದೇವೆ, ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲದ ವಿನಾಯಿತಿ ಇಲ್ಲಿ ಕೊಡಲಾಗಿದೆ. 10 ಸಾವಿರ ಕೋಟಿ ಹೂಡಿಕೆಯಾಗಿ 1 ಲಕ್ಷ ಉದ್ಯೋಗ ಸೃಷ್ಟಿ ಹುಬ್ಬಳ್ಳಿಯಲ್ಲಿ ಆಗಲಿದೆ ಎಂದರು.
ಪ್ರತಿ ಎರಡು ವರ್ಷಕ್ಕೆ ಸಮಾವೇಶ ನಡೆಯಬೇಕು ಎಂದು ಸಿಎಂ ಸಲಹೆ ನೀಡಿದ್ದಾರೆ. 2025ರ ಜನವರಿಯಲ್ಲಿ ಮತ್ತೆ ಸಮಾವೇಶ ನಡೆಯಲಿದೆ. ನಾವು ಈ ಬಾರಿ ಕಂಪನಿ ಆರಂಭಿಸುವವರೊಂದಿಗೆ ಮಾತ್ರ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಬಂದ ಬಂದವರ ಜೊತೆ ಎಲ್ಲಾ ಹಿಂದೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿತ್ತು.
ಆದರೆ, ಈ ಬಾರಿ ಅನುಷ್ಠಾನಕ್ಕೆ ತರುವವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಶೇ.70 ರಷ್ಟು ಹೂಡಿಕೆ ಬೆಂಗಳೂರು ಹೊರಗೆ ಹೂಡಿಕೆಗೆ ಒಡಂಬಡಿಕೆ ಆಗಿದೆ ಎಂದರು. ಯಾವ ಕ್ಷೇತ್ರ, ಎಷ್ಟು ಹೂಡಿಕೆ ಎನ್ನುವ ಮಾಹಿತಿಯನ್ನು ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ ಎಂದರು.
ಗ್ರೀನ್ ಎನರ್ಜಿಯಲ್ಲಿ ಮೊದಲ ಸ್ಥಾನ:ನಂತರ ಮಾತನಾಡಿದ ಇಂಧನ ಸಚಿವ ಸುನೀಲ್ ಕುಮಾರ್, 2022ರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 2 ಲಕ್ಷ ಕೋಟಿ ಹಸಿರು ಇಂಧನಕ್ಕೆ ಹೂಡಿಕೆ ಮಾಡಲು ಒಡಂಬಡಿಕೆಯಾಗಿದ್ದು ನಾವು ಅವರಿಗೆಲ್ಲ ಅಗತ್ಯ ಸೌಲಭ್ಯ ಕಲ್ಪಿಸಲು ಬದ್ದವಿದ್ದೇವೆ ಎಂದರು.
ಉದ್ಯಮಗಳಿಗೆ ಮೂಲ ಸೌಕರ್ಯ ಒದಗಿಸಲು ಇಂಧನ ಇಲಾಖೆ ಪ್ರಮುಖವಾಗಿದ್ದು ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಲಿದ್ದೇವೆ. ರಾಜ್ಯದಲ್ಲಿ ಹಸಿರು ಇಂಧನ ಉತ್ಪಾದನೆ ಕುರಿತು ಹಲವು ವರ್ಷಗಳಿಂದ ಬೇರೆಲ್ಲ ರಾಜ್ಯಗಳಿಗಿಂತ ಮುಂದಿದ್ದೇವೆ. 30 ಸಾವಿರ ಮೆಗಾವ್ಯಾಟ್ ನಲ್ಲಿ ಶೇ.50 ರಷ್ಟು ಹಸಿರು ಇಂಧನದಿಂದ ಉತ್ಪಾದನೆ ಮಾಡಲಾಗುತ್ತಿದೆ. ಮುಂದಿನ 10-15 ವರ್ಷದಲ್ಲಿ ಏನಾಗಬೇಕು ಎಂದು ಸಲಹೆ ಸೂಚನೆ ಸಿಎಂ ನೀಡಿದ್ದು, ಸೋಲಾರ್ ಮತ್ತು ವಿಂಡ್ ಎರಡೂ ಇರುವ ಹೈಬ್ರೀಡ್ ಪಾರ್ಕ್ ಅನ್ನು ಬಜೆಟ್ನಲ್ಲಿ ಪ್ರಕಟಿಸಿದ್ದಾರೆ. ಹಾಗಾಗಿ ಇಂಧನ ಇಲಾಖೆಯಲ್ಲಿ ಹೂಡಿಕೆಗೆ ಹೆಚ್ಚು ಅವಕಾಶವಿದ್ದು ಹೂಡಿಕೆದಾರರಿಗೆ ಬೇಕಾದ ಎಲ್ಲ ಸೌಕರ್ಯ ಕಲ್ಪಿಸಲು ಬದ್ದವಿದ್ದೇವೆ ಎಂದರು.
2030 ರಲ್ಲಿ ನಮ್ಮ ಉತ್ಪಾದನೆಯಲ್ಲಿ ಶೇ.50 ರಷ್ಟು ಹಸಿರು ಇಂಧನ ಆಗಿರಬೇಕು ಎಂದಿದ್ದಾರೆ ಅದರಲ್ಲಿ ನಾವು ಮೊದಲ ಸ್ಥಾನದಲ್ಲಿರಲಿದ್ದೇವೆ. ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಮುಂದಿನ ದಿನದಲ್ಲಿ ಹಸಿರು ಇಂಧನ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸೋಲಾರ್ ಸ್ಟೋರೇಜ್ ಮಾಡಿಕೊಳ್ಳಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಇದನ್ನೂ ಓದಿ:ಕರ್ನಾಟಕ ಭಾರತದ ಕಾಫಿ ತವರು : ಜೆವ್ ಸೀಗಲ್ ಬಣ್ಣನೆ