ಕರ್ನಾಟಕ

karnataka

ETV Bharat / state

ಮುರುಘಾ ಶರಣರ ವಿರುದ್ಧ ಪ್ರಕರಣ ದಾಖಲಿಸಲು ಪ್ರಚೋದನೆ ಆರೋಪ: ಎಫ್‌ಐಆರ್ ರದ್ದತಿ ಕೋರಿ ಹೈಕೋರ್ಟ್​ಗೆ ಅರ್ಜಿ - ಎಫ್‌ಐಆರ್ ರದ್ದು ಪಡಿಸುವಂತೆ ಮನವಿ

ಡಾ.ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಪ್ರಕರಣ - ಸಂತ್ರಸ್ತರಿಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದು ಪಡಿಸುವಂತೆ ಮನವಿ - ಹೈಕೋರ್ಟ್​ಗೆ ಮಾಜಿ ಆಡಳಿತಾಧಿಕಾರಿ ಎಸ್​ಕೆ ಬಸವರಾಜನ್ ಮತ್ತವರ ಪತ್ನಿ ಸೌಭಾಗ್ಯ ಅರ್ಜಿ

muruga-sharanaru-case-petition-to-high-court-seeking-quashing-of-fir
ಮುರುಘಾ ಶರಣರ ವಿರುದ್ಧ ಪ್ರಕರಣ ದಾಖಲಿಸಲು ಪ್ರಚೋದನೆ ಆರೋಪ: ಎಫ್‌ಐಆರ್ ರದ್ಧತಿಗೆ ಕೋರಿ ಹೈಕೋರ್ಟ್​ಗೆ ಅರ್ಜಿ

By

Published : Jan 4, 2023, 9:53 PM IST

ಬೆಂಗಳೂರು : ಚಿತ್ರದುರ್ಗದ ಮುರುಘಾ ರಾಜೇಂದ್ರ ಬೃಹನ್ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲು ಸಂತ್ರಸ್ತರಿಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಮಠದ ಮಾಜಿ ಆಡಳಿತಾಧಿಕಾರಿ ಎಸ್​ಕೆ ಬಸವರಾಜನ್ ಮತ್ತವರ ಪತ್ನಿ ಸೌಭಾಗ್ಯ ಹೈಕೋರ್ಟ್​ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ದೂರುದಾರರಾದ ಮರುಘಾ ರಾಜೇಂದ್ರ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಗ್ರಾಮೀಣಾ ಠಾಣಾ ಪೊಲೀಸರನ್ನು ಪ್ರತಿವಾದಿಗಿಸಲಾಗಿದೆ.

ಪೋಕ್ಸೋ ಪ್ರಕರಣ ದಾಖಲಿಸಲು ಕುರಿತಾಗಿ ಮಠ ನಡೆಸುತ್ತಿರುವ ಪ್ರಿಯದರ್ಶಿನಿ ಶಾಲೆಯ ಶಿಕ್ಷಕ ಬಸವ ರಾಜೇಂದ್ರಪ್ಪ ಮತ್ತು ಪ್ರಕರಣದ ಸಂತ್ರಸ್ತೆಯ ತಾಯಿ ಮಧ್ಯೆ ನಡೆದ ಮೊಬೈಲ್ ಕರೆ ಸಂಭಾಷಣೆಯನ್ನು ಆಧರಿಸಿ ದೂರುದಾರರು ಪೊಲೀಸರಿಗೆ ಈ ದೂರು ದಾಖಲಿಸಿದ್ದಾರೆ.

ಸಂತ್ರಸ್ತರಿಗೆ ಪ್ರಚೋದನೆ, ಪಿತೂರಿ: ಡಾ.ಶಿವಮೂರ್ತಿ ಮರುಘಾ ಶರಣರ ವ್ಯಕ್ತಿತ್ವ ಮತ್ತು ಘನತೆಗೆ ಧಕ್ಕೆ ತಂದು ಮತ್ತು ಅವರಿಗೆ ಕಿರುಕುಳ ನೀಡುವ ಉದ್ದೇಶದಿಂದ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ದೂರು ದಾಖಲಿಸಲು ಸಂತ್ರಸ್ತರಿಗೆ ಪ್ರಚೋದನೆ ನೀಡಲಾಗಿದೆ ಹಾಗೂ ಪಿತೂರಿ ನಡೆಸಲಾಗಿದೆ ಎಂಬುದಾಗಿ ದೂರಿನಲ್ಲಿ ಆರೋಪಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅಲ್ಲದೇ, ಪ್ರಕರಣ ಸಂಬಂಧ ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ ತಮ್ಮ ಹೆಸರು ಉಲ್ಲೇಖವಾಗಿಲ್ಲ. ಆದರೂ, ಪೊಲೀಸರು ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮನ್ನು ಬಂಧಿಸಿದ್ದಾರೆ. ತಮಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದೂ ಅರ್ಜಿದಾರರಾದ ಎಸ್​ಕೆ ಬಸವರಾಜನ್ ಮತ್ತು ಪತ್ನಿ ಸೌಭಾಗ್ಯ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ವೈಯಕ್ತಿಕ ಸ್ವಾತಂತ್ರದ ಹಕ್ಕು ಉಲ್ಲಂಘನೆ: ಪೊಲೀಸರು ನಡೆಯಿಂದ ಈ ಸಂವಿಧಾನದ ಪರಿಚ್ಛೇದ 12 ಅಡಿಯಲ್ಲಿ ತಮಗೆ ಪ್ರಾಪ್ತವಾಗಿರುವ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರದ ಹಕ್ಕು ಉಲ್ಲಂಘನೆಯಾಗಿದೆ. ಆದ್ದರಿಂದ ಈ ಎಫ್‌ಐಆರ್ ರದ್ದುಪಡಿಸಬೇಕೆಂದು ಅರ್ಜಿದಾರರು ಉಚ್ಚನ್ಯಾಯಾಲಯಕ್ಕೆ ಕೋರಿದ್ದಾರೆ. ಈ ಹಿಂದೆ ಇದೇ ಆರೋಪಕ್ಕೆ ಸಂಬಂಧಿಸಿದಂತೆ ಒಂದು ಎಫ್ಐಆರ್ ದಾಖಲಿಸಲಾಗಿದೆ. ಇದೀಗ ಇದೇ ಆರೋಪದಲ್ಲಿ ಮತ್ತೊಂದು ಎಫ್ಐಆರ್ ದಾಖಲು ಮಾಡಲಾಗಿದೆ. ಇದರಿಂದ ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಎಫ್ಐಆರ್ ದಾಖಲಿಸಿ ಅರ್ಜಿದಾರರಿಗೆ ತೊಂದರೆ ನೀಡಲಾಗುತ್ತಿದೆ. ಇದರಿಂದ ಅರ್ಜಿದಾರರ ಗೌರವಕ್ಕೆ ಧಕ್ಕೆ ತರುವಂತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಅಲ್ಲದೇ, ಪ್ರಕರಣದ ಎರಡನೇ ಅರ್ಜಿದಾರರು ಗರ್ಭಾಶಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜೊತೆಗೆ ಒಂದೇ ಆರೋಪ ಸಂಬಂಧ ಎರಡು ಪ್ರಕರಣಗಳನ್ನು ದಾಖಲಿಸುವಂತಿಲ್ಲ ಎಂದು ಟಿಟಿ ಆಂಟೋನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತಿಳಿಸಿದೆ. ಈ ಹಿನ್ನೆಯಲ್ಲಿ ಪ್ರಕರಣವನ್ನು ರದ್ದು ಮಾಡಬೇಕೆಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಇನ್ನು, ಮುರುಘಾ ಶರಣರ ವಿರುದ್ಧ ಸುಳ್ಳು ಕೇಸು ದಾಖಲಿಸಲು ಕ್ರಿಮಿನಲ್ ಸಂಚು ರೂಪಿಸಿದ ಆರೋಪದಡಿ ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕರಾದ ಎಸ್​ಕೆ ಬಸವರಾಜನ್​ ಅವರನ್ನು ನವೆಂಬರ್​ 10ರಂದು ಬಂಧಿಸಲಾಗಿತ್ತು. ಅಲ್ಲದೇ, ಅವರ ಪತ್ನಿ ಸೌಭಾಗ್ಯ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು. ಕಳೆದ ಡಿ.22ರಂದು ಬಸವರಾಜನ್​ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

ಇದನ್ನೂ ಓದಿ:ಮುರುಘಾ ಶರಣರ ವಿರುದ್ಧದ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್ ಸಾಧ್ಯತೆ​.. ಬಾಲಕಿಯರ ಮೇಲೆ ಅತ್ಯಾಚಾರ ಆಗಿಲ್ಲ ಎಂದು ವೈದ್ಯರ ರಿಪೋರ್ಟ್​​​!

ABOUT THE AUTHOR

...view details