ಬೆಂಗಳೂರು: ಆರೋಪಿ ಸ್ಥಾನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಮುರುಘಾ ಶರಣರು ಮಠದಲ್ಲಿ ಅಧಿಕಾರ ಚಲಾಯಿಸುವಂತಿಲ್ಲ ಎಂಬುದಾಗಿ ಆದೇಶಿಸಿರುವ ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಬೇರೊಂದು ನ್ಯಾಯಪೀಠಕ್ಕೆ ವರ್ಗಾವಣೆ ಮಾಡಿದೆ. ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ನ ನ್ಯಾಯಾಲಯ 2022ರ ಡಿಸೆಂಬರ್ 15ರಂದು ನೀಡಿರುವ ಆದೇಶ ಪ್ರಶ್ನಿಸಿ ಮುರುಘಾ ಶರಣರು ಸಲ್ಲಿಸಿರುವ ರಿಟ್ ಅರ್ಜಿ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ವಿಚಾರಣೆ ವೇಳೆ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಅವರು,ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ಅರ್ಜಿ ಈಗಾಗಲೇ ಏಕ ಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ, ಈ ಅರ್ಜಿಯನ್ನೂ ಅದೇ ರಿಟ್ ಅರ್ಜಿಯ ಜೊತೆ ಸೇರ್ಪಡೆ ಮಾಡಿ ವಿಚಾರಣೆ ನಡೆಸಲು ಆದೇಶಿಸಬೇಕು ಎಂದು ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿ ವರ್ಗಾವಣೆಗೆ ಆದೇಶಿಸಿತು. ಅಲ್ಲದೆ, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ 1988ರ ಕಲಂ 8 (2)ರ ಅನ್ವಯ ಶರಣರು ತಮ್ಮ ಅಧಿಕಾರ ಚಲಾಯಿಸಲು ನಿರ್ಬಂಧ ವಿಧಿಸಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ವಿಚಾರಣೆ: ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಏಕಸದಸ್ಯ ನ್ಯಾಯಪೀಠ ಫೆ. 2ರಂದು ವಿಚಾರಣೆ ನಡೆಸಲಿದೆ. ಅಪರಾಧಿ ಮೃತಪಟ್ಟ ಬಳಿಕ ಆತನಿಗೆ ವಿಧಿಸಿದ ದಂಡವನ್ನು ಆತನ ಆಸ್ತಿಯಿಂದ ಇಲ್ಲವೇ, ಉತ್ತರಾಧಿಕಾರಿಯಿಂದ ವಸೂಲು ಮಾಡಿಕೊಳ್ಳಬಹುದು ಎಂದು ಹೈಕೋರ್ಟ್ ಇತ್ತೀಚೆಗೆ ಮಹತ್ವದ ಆದೇಶ ನೀಡಿದೆ.
ಇದನ್ನೂ ಓದಿ:ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಇಲಾಖಾವಾರು ತನಿಖೆಗೆ ಹೈಕೋರ್ಟ್ ಸೂಚನೆ