ಬೆಂಗಳೂರು: ಚಿತ್ರದುರ್ಗ ಮುರುಘಾ ರಾಜೇಂದ್ರ ಬೃಹನ್ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶರಣರ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ಎಸ್.ರಶ್ಮಿ ಅವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಕುಮ್ಮಕ್ಕು ನೀಡಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಎಸ್.ರಶ್ಮಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮದ್ ನವಾಜ್ ಅವರಿದ್ದ ಪೀಠ ಜಾಮೀನು ಮಂಜೂರು ಮಾಡಿ ಆದೇಶಿಸಿತು.
ಅಲ್ಲದೇ ಅರ್ಜಿದಾರರು ಎರಡು ಲಕ್ಷ ರೂ ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು ಹಾಗೂ ಸಹಕರಿಸಬೇಕು ಎಂದು ಕೋರ್ಟ್ ಷರತ್ತುಗಳನ್ನು ವಿಧಿಸಿದೆ.
ಪ್ರಕರಣದಲ್ಲಿ ಅಪರಾಧ ಕೃತ್ಯ ಎಸಗಲು ಮೊದಲನೆ ಆರೋಪಿ ಮುರುಘಾ ಮಠದ ಡಾ.ಶಿವಮೂರ್ತಿ ಶರಣರಿಗೆ ಕುಮ್ಮಕ್ಕು ಹಾಗೂ ಸಹಕಾರ ನೀಡಿದ ಆರೋಪ ಅರ್ಜಿದಾರೆಯ ಮೇಲಿದೆ. ಇದೇ ಆರೋಪವನ್ನು ಮೂರನೇ ಆರೋಪಿ ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಪರಮಶಿವಯ್ಯ ಎದುರಿಸುತ್ತಿದ್ದಾರೆ. ಅವರಿಗೆ ಈಗಾಗಲೇ ನ್ಯಾಯಾಲಯ ಜಾಮೀನು ನೀಡಿದೆ.