ಕರ್ನಾಟಕ

karnataka

ETV Bharat / state

ಮುರುಘಾ ಮಠದ ಆಡಳಿತ ಜಿಲ್ಲಾ ನ್ಯಾಯಾಧೀಶರ ನಿಗಾದಲ್ಲಿ ಮುಂದುವರೆಯಲಿದೆ: ಹೈಕೋರ್ಟ್​ - ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ

ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ಅವರನ್ನು ರಾಜ್ಯ ಸರ್ಕಾರವು ಮುರುಘಾ ಮಠದ ಆಡಳಿತಾಧಿಕಾರಿಯನ್ನಾಗಿ ನೇಮಿಸಿತ್ತು.

Highcourt
ಹೈಕೋರ್ಟ್​

By ETV Bharat Karnataka Team

Published : Sep 28, 2023, 10:26 PM IST

ಬೆಂಗಳೂರು: ಚಿತ್ರದುರ್ಗದ ಮುರುಘಾರಾಜೇಂದ್ರ ಬೃಹನ್​ಮಠ ಮತ್ತು ವಿದ್ಯಾಪೀಠದ ಆಡಳಿತ ಮತ್ತು ನಿರ್ವಹಣೆಯ ಮೇಲೆ ಜಿಲ್ಲಾ ಪ್ರಧಾನ ನ್ಯಾಯಾಧೀಶರ ನಿಗಾ ಮುಂದುವರಿಸಲಿದ್ದಾರೆ ಎಂದು ಹೈಕೋರ್ಟ್​ ಆದೇಶಿಸಿದೆ.

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ್ದ ಆದೇಶ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕೆ ಎಸ್ ನವೀನ್ ಮತ್ತಿತರರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಸೂಚನೆ ನೀಡಿ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿದೆ. 2023ರ ಮೇ 28ರಂದು ಮಠ ಮತ್ತು ವಿದ್ಯಾಪೀಠದ ಮೇಲ್ವಿಚಾರಣೆಗಾಗಿ ಸಮಿತಿ ರಚಿಸಲಾಗಿದ್ದು, ಇಡೀ ಜವಾಬ್ದಾರಿಯನ್ನು ಬಸವ ಪ್ರಭು ಸ್ವಾಮಿ ಅವರಿಗೆ ನೀಡಲಾಗಿದೆ. ಅದಾಗ್ಯೂ, ಮಠ ಮತ್ತು ವಿದ್ಯಾಪೀಠದ ಆಡಳಿತ ಮತ್ತು ನಿರ್ವಹಣೆಯ ಮೇಲೆ ಜಿಲ್ಲಾ ಪ್ರಧಾನ ನ್ಯಾಯಾಧೀಶರು ನಿಗಾ ಇಡಲಿದ್ದಾರೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ವಿದ್ಯಾಪೀಠದ ಬೈಲಾ, ನಿಯಮಗಳು ಮತ್ತು ನಿಯಂತ್ರಣಗಳ ಪ್ರಕಾರ ಅಧ್ಯಕ್ಷರ ನೇಮಕವಾಗುವವರೆಗೆ ಜಿಲ್ಲಾ ನ್ಯಾಯಾಧೀಶರ ಉಸ್ತುವಾರಿ ಅಗತ್ಯ. ವಿದ್ಯಾಪೀಠಕ್ಕೆ ಹೊಸ ಅಧ್ಯಕ್ಷರ ನೇಮಕವಾದ ಬಳಿಕ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಪಾತ್ರ ಅಂತ್ಯಗೊಳ್ಳಲಿದೆ ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ ಏನು?:ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಮುರುಘಾ ರಾಜೇಂದ್ರ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಬಂಧನಕ್ಕೆ ಒಳಗಾಗಿದ್ದಾರೆ. ಇವರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ಅವರನ್ನು ರಾಜ್ಯ ಸರ್ಕಾರವು ಆಡಳಿತಾಧಿಕಾರಿಯನ್ನಾಗಿ ನೇಮಿಸಿತ್ತು. ಸರ್ಕಾರದ ಈ ಆದೇಶವನ್ನು ಏಕಸದಸ್ಯ ಪೀಠವು ವಜಾ ಮಾಡಿತ್ತು.

ಈ ನಡುವೆ 2023ರ ಮೇ 28ರಂದು ಚಿತ್ರದುರ್ಗದ ಮಹಾಲಿಂಗಸ್ವಾಮಿ ಕನ್ವೆನ್ಷನ್ ಹಾಲ್​ನಲ್ಲಿ ಮಠದ ಭಕ್ತರು, ಲಿಂಗಾಯತ ಸಮುದಾಯದ ನಾಯಕರು, ಬಸವ ಕೇಂದ್ರದ ನಿರ್ದೇಶಕರು ಮತ್ತು ನಾಯಕರು ಹಾಗೂ ಶಾಸಕರ ಸಮ್ಮುಖದಲ್ಲಿ ಸಭೆ ನಡೆದಿದ್ದು, ಇಡೀ ವಿದ್ಯಾಪೀಠ ಮತ್ತು ಮಠದ ಆಡಳಿತ ಜವಾಬ್ದಾರಿಯನ್ನು ಬಸವಪ್ರಭು ಸ್ವಾಮಿ ಅವರಿಗೆ ನೀಡಲಾಗಿದೆ. ಆನಂತರ ಸಮುದಾಯದ ೧೮ ಮಂದಿಯನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಉಳಿದವರನ್ನು ಮೇಲ್ವಿಚಾರಣಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು.

ಅಲ್ಲದೆ, 2023ರ ಜುಲೈ 4ರಿಂದ ಚಿತ್ರದುರ್ಗ ಮಠ ಮತ್ತು ವಿದ್ಯಾಪೀಠದ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸುವಂತೆ ಜಿಲ್ಲಾ ಪ್ರಧಾನ ನ್ಯಾಯಾಧೀಶರಿಗೆ ಸೂಚಿಸಲಾಗಿತ್ತು. ಮಠ ಮತ್ತು ವಿದ್ಯಾಪೀಠದ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವಂತೆ ಅವರಿಗೆ ತಿಳಿಸಲಾಗಿತ್ತು. ಆದರೆ, ಯಾವುದೇ ನೀತಿ ನಿರೂಪಣಾ ನಿರ್ಧಾರ ಕೈಗೊಳ್ಳುವಂತಿಲ್ಲ. ಇದಕ್ಕೆ ಪೂರಕವಾಗಿ ಅಗತ್ಯ ಮಾನವ ಸಂಪನ್ಮೂಲ ಮತ್ತಿತರ ಬೆಂಬಲ ನೀಡುವಂತೆ ಜಿಲ್ಲಾ ದಂಡಾಧಿಕಾರಿಗೆ ಆದೇಶಿಸಿತ್ತು. ಈ ಅರ್ಜಿ ವಿಚಾರಣಾ ಹಂತದಲ್ಲಿ ರಾಜ್ಯ ಸರ್ಕಾರವು ಆಡಳಿತಾಧಿಕಾರಿ ನೇಮಕ ಆದೇಶವನ್ನು ಹಿಂಪಡೆದಿತ್ತು. ಇದೀಗ ಮೇಲ್ವಿಚರಣಾ ಸಮಿತಿಯ ಜವಾಬ್ದಾರಿ ನಿಭಾಯಿಸಲಿದ್ದು, ಜಿಲ್ಲಾ ಪ್ರಧಾನ ನ್ಯಾಯಾಧೀಶರು ಅದರ ಮೇಲೆ ನಿಗಾ ಇಡಲಿದ್ದಾರೆ ಎಂದು ಹೈಕೋರ್ಟ್ ಆದೇಶ ಮಾಡಿದೆ.

ಇದನ್ನೂ ಓದಿ:ಮುರುಘಾ ಮಠಕ್ಕೆ ಆಡಳಿತಾಧಿಕಾರ ನೇಮಕ ವಿಚಾರ: ಕೂಲಂಕಷವಾಗಿ ವಿಚಾರಣೆ ಅಗತ್ಯವೆಂದ ಹೈಕೋರ್ಟ್

ABOUT THE AUTHOR

...view details