ಬೆಂಗಳೂರು : ಪ್ರಿಯಕರನ ಜೊತೆಗೂಡಿ ಗಂಡನನ್ನೇ ಕೊಲೆ ಮಾಡಿದ್ದ ಮಹಿಳೆಗೆ ಕೊನೆಗೆ ಸ್ವಂತ ಮಗಳು ನುಡಿದ ಸತ್ಯ ಉರುಳಾಗಿದೆ. ಕೊಲೆ ಮಾಡಿ, ಸಹಜ ಸಾವು ಎಂದು ಬಿಂಬಿಸಿ ಆರಾಮಾಗಿದ್ದವರು ಆರು ತಿಂಗಳ ಬಳಿಕ ಮಗಳು ಬಿಚ್ಚಿಟ್ಟ ಸತ್ಯದಿಂದ ಕೊನೆಗೆ ಪ್ರಿಯಕರನ ಜೊತೆ ಪೊಲೀಸರ ಅತಿಥಿಯಾಗಿದ್ದಾಳೆ. ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳ ಹಿಂದೆ ಆಂಜನೇಯ(35) ಎಂಬಾತನನ್ನ ಕೊಲೆಯಾಗಿತ್ತು. ಈ ಸಂಬಂಧ ಮೃತನ ಪತ್ನಿ ಅನಿತಾ ಹಾಗೂ ಆಕೆಯ ಪ್ರಿಯಕರ ರಾಕೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ?: ಹದಿನೈದು ವರ್ಷಗಳ ಹಿಂದೆ ಮದುವೆಯಾಗಿದ್ದ ಆಂಜನೇಯ ಹಾಗೂ ಅನಿತಾ ದಂಪತಿಗೆ ಇಬ್ಬರು ಮಕ್ಕಳಿದ್ದರು. ಮದ್ಯದ ದಾಸನಾಗಿದ್ದ ಆಂಜನೇಯನ ಆರೋಗ್ಯ ಹದಗೆಟ್ಟಿತ್ತು. ಅಷ್ಟೇ ಅಲ್ಲದೆ ಆಂಜನೇಯ ಮನೆ ನಿರ್ವಹಣೆಗೆ ಯಾವುದೇ ಸಹಾಯ ಮಾಡುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಅನಿತಾಳಿಗೆ ರಾಕೇಶ್ ಎಂಬಾತನ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು.
ಉಸಿರುಗಟ್ಟಿಸಿ ಗಂಡನ ಕೊಲೆ : ಕಳೆದ ಜೂ.18ರಂದು ಆಂಜನೇಯನ ಕಥೆ ಮುಗಿಸಲು ಅನಿತಾ ಹಾಗೂ ರಾಕೇಶ್ ಸಂಚು ರೂಪಿಸಿದ್ದರು. ಅಂದು ರಾತ್ರಿ ಆಂಜನೇಯ ಮಲಗಿರುವಾಗ ಉಸಿರುಗಟ್ಟಿಸಿ ಕೊಲೆಗೈದಿದ್ದರು. ಕೊಲೆಯನ್ನು ಕಣ್ಣಾರೆ ಕಂಡಿದ್ದ ಇಬ್ಬರು ಮಕ್ಕಳಿಗೆ ಕೃತ್ಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ ಕುಡಿದು ಕುಡಿದು ಆಂಜನೇಯನ ಸಾವು ಸಂಭವಿಸಿದೆ ಎಂದು ಸಂಬಂಧಿಕರು ಅಕ್ಕಪಕ್ಕದವರ ಬಳಿ ಕಥೆ ಕಟ್ಟಿದ್ದ ಅನಿತಾ ಗಂಡನ ಶವಸಂಸ್ಕಾರ ಮಾಡಿ ಏನೂ ಆಗದವಳಂತೆ ಇದ್ದಳು.
ಸ್ವಂತ ಮಕ್ಕಳಿಗೆ ಕೊಲೆ ಬೆದರಿಕೆ: ಇತ್ತೀಚೆಗೆ ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಅನಿತಾ ನಾಪತ್ತೆಯಾದ ಬಳಿಕ ಮಕ್ಕಳಿಬ್ಬರೂ ತಮ್ಮ ಅಜ್ಜಿಯ ಮನೆ ಸೇರಿದ್ದರು. ಅದೇ ಸಂದರ್ಭದಲ್ಲಿ ಮಕ್ಕಳು ತಮ್ಮ ತಾಯಿಯ ಕ್ರೂರತೆಯನ್ನು ಅಜ್ಜಿಯ ಮುಂದೆ ಬಿಚ್ಚಿಟ್ಟಿದ್ದರು. ಬಳಿಕ 14 ವರ್ಷದ ಹಿರಿಯ ಮಗಳ ಹೇಳಿಕೆ ಆಧರಿಸಿ ಜನವರಿ 4ರಂದು ದೂರು ಪಡೆದ ನಂದಿನಿ ಲೇಔಟ್ ಪೊಲೀಸರು ಆರೋಪಿಗಳಾದ ಅನಿತಾ ಹಾಗೂ ಆಕೆಯ ಪ್ರಿಯಕರ ರಾಕೇಶನನ್ನು ಬಂಧಿಸಿದ್ದರು. ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಕೂಡಾ ನೀಡಿದ್ದಾರೆ.