ಬೆಂಗಳೂರು:ಆಸ್ತಿಯ ವಿಚಾರವಾಗಿ ಪತ್ನಿ ಅಡ್ಡ ಬರುತ್ತಿದ್ದಳು ಎಂಬ ಕಾರಣಕ್ಕೆ ಮಗ ಹಾಗೂ ಪತಿ ಸುಪಾರಿ ನೀಡಿ ಆಕೆಯನ್ನು ಕೊಲೆ ಮಾಡಿಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಲ್ಕು ಜನ ಸುಪಾರಿ ಕಿಲ್ಲರ್ಸ್ ಸೇರಿದಂತೆ ವರುಣ್, ನವೀನ್ ಕುಮಾರ್, ನಾಗರಾಜ್, ಪ್ರದೀಪ್, ನಾಗ ಹಾಗೂ ಆಂಜನಿ ಎಂಬುವವರನ್ನು ಬಂಧಿಸಲಾಗಿದೆ. ಇನ್ನು ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್ ಸೇರಿದಂತೆ ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೇ ತಿಂಗಳ 16 ರಂದು ಬೆಳಗ್ಗೆ 2 ಗಂಟೆ ಸುಮಾರಿಗೆ, ಮನೆಯ ಮೇಲ್ಚಾವಣಿಯ ಶೀಟ್ ಅನ್ನ ಒಡೆದು ಗೀತಾರ ಮೇಲೆ ಅಟ್ಯಾಕ್ ಮಾಡಲಾಗಿತ್ತು. ಆರೋಪಿಗಳ ಕೃತ್ಯದಿಂದ ಮಹಿಳೆಯು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ವೇಳೆ ತಡೆಯಲು ಬಂದ ಯುವಕನಿಗೆ ಕೂಡ ಗಾಯವಾಗಿತ್ತು.
ಇನ್ನು ಪೊಲೀಸರು ಪ್ರಾಥಮಿಕ ವಿಚಾರಣೆಗೆ ಇಳಿದಾಗ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಗೀತಾಳ ಜೊತೆ ಆಕೆಯ ಪತಿ ಆಂಜನಿ ಮತ್ತು ಮಗ ವರುಣ್ ಜಗಳವಾಡಿಕೊಂಡಿರುವ ವಿಚಾರ ಗೊತ್ತಾಗಿದೆ. ಈ ಹಿನ್ನೆಲೆ ಪತ್ನಿಯನ್ನು ಕೊಲ್ಲುವಂತೆ ಮಗ ಹಾಗೂ ಪತಿ ಹಣದ ಆಮಿಷವೊಡ್ಡಿ ಸುಪಾರಿ ಕೊಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.
ಮೊದಲು ಬಂಡೆ ಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಂದೆ ಮತ್ತು ಮಗನ ಬಂಧನ ಮಾಡಿ ತದನಂತರ ಉಳಿದ ಆರೋಪಿಗಳ ಬಂಧಿಸಿದ್ದಾರೆ. ಇನ್ನು ಗೀತಾಳನ್ನು ಕೊಲೆ ಮಾಡಲು ಎರಡು ಬಾರಿ ಸಂಚು ರೂಪಿಸಿದ್ದ ವಿಚಾರ ಕೂಡ ತನಿಖೆಯಲ್ಲಿ ಬಾಯಿ ಬಿಟ್ಟಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿ ಕೋವಿಡ್ ಟೆಸ್ಟ್ಗೆ ಒಳಪಡಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.