ಹೊಸಕೋಟೆ (ಬೆಂಗಳೂರು ಗ್ರಾಮಾಂತರ):ಚುನಾವಣೆ ಫಲಿತಾಂಶ ಹಿನ್ನೆಲೆ ನಿನ್ನೆ ಪಟಾಕಿ ಸಿಡಿಸಿ ಹಲೆಡೆ ಸಂಭ್ರಮಾಚರಣೆ ನಡೆಸಲಾಗಿದೆ. ಮನೆ ಮುಂದೆ ಪಟಾಕಿ ಹೊಡೆದ ವಿಚಾರಕ್ಕೆ ದಾಯಾದಿ ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಕೊಡಲಿಯಿಂದ ದೊಡ್ಡಪ್ಪನನ್ನೇ ಕೊಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಹೊಸಕೋಟೆ ತಾಲೂಕಿನ ಡಿ. ಶೆಟ್ಟಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಕೃಷ್ಣಪ್ಪ (56) ಕೊಲೆಯಾದ ವ್ಯಕ್ತಿ. ಮೃತರ ಪತ್ನಿ ಗಂಗಮ್ಮ, ಪುತ್ರ ಬಾಬು ಮೇಲೆ ಸಹ ಹಲ್ಲೆಯಾಗಿದೆ ಎನ್ನುವ ಆರೋಪವಿದೆ. ತಾಯಿ ಮಗ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ರನ ಪರಿಸ್ಥಿತಿ ಚಿಂತಾಜನಕವಾಗಿದೆ.
ಕೊಲೆಯಾದ ಕೃಷ್ಣಪ್ಪ ಮತ್ತು ಗಣೇಶಪ್ಪ ಸಹೋದರರು. ಗಣೇಶಪ್ಪ ಶಾಸಕ ಶರತ್ ಬಚ್ಚೇಗೌಡರ ಬೆಂಬಲಿಗರು ಎಂದು ಹೇಳಲಾಗಿದೆ. ನಿನ್ನೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಶರತ್ ಬಚ್ಚೇಗೌಡ ಅವರು ಜಯ ಗಳಿಸಿದರು. ಈ ಗೆಲುವಿನ ಹಿನ್ನೆಲೆ ಗಣೇಶಪ್ಪ ಅವರ ಮಕ್ಕಳು ಸೇರಿದಂತೆ ಕೆಲವರು ಕೃಷ್ಣಪ್ಪ ಅವ ಮನೆ ಮುಂದೆ ಪಟಾಕಿ ಹೊಡೆದಿದ್ದಾರೆ. ಇದೇ ವಿಚಾರಕ್ಕೆ ದಾಯಾದಿ ಕುಟುಂಬಗಳ ನಡುವೆ ಗಲಾಟೆ ನಡೆದಿದೆ.
ಗಣೇಶಪ್ಪ ಅವರ ಮಗ ಆದಿತ್ಯ ಕೊಡಲಿಯಿಂದ ದೊಡ್ಡಪ್ಪ ಕೃಷ್ಣಪ್ಪ ಮತ್ತು ಆತನ ಪತಿ ಗಂಗಮ್ಮ, ಮಗ ಬಾಬು ಮೇಲೆ ಹಲ್ಲೆ ಮಾಡಿದ್ದಾರೆ. ಕೊಡಲಿ ಏಟಿಗೆ ಕೃಷ್ಣಪ್ಪ ಸ್ಥಳದಲ್ಲೇ ಸಾವನ್ನಪ್ಪಿದಾರೆ. ಹಲ್ಲೆಗೊಳಗಾದ ಬಾಬು ಮತ್ತು ಗಂಗಮ್ಮ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.