ಬೆಂಗಳೂರು :ಆಸ್ತಿಗಾಗಿ ಚಿಕ್ಕಪ್ಪನೊಂದಿಗೆ ಸೇರಿ ಮಗನೇ ತನ್ನ ತಂದೆಯನ್ನು ಕೊಲೆ ಮಾಡಿರುವ ಪ್ರಕರಣವನ್ನು ತಲಘಟ್ಟಪುರ ಪೊಲೀಸರು ಬೇಧಿಸಿದ್ದಾರೆ.
ಬಳ್ಳಾರಿಯ ಸ್ಟೀಲ್ ಅಂಡ್ ಅಲೈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿಂಗನಮನ ಮಾಧವ ಅವರನ್ನು ಫೆಬ್ರವರಿ 14ರಂದು ಕೊಲೆ ಮಾಡಲಾಗಿತ್ತು. ಗುಬ್ಬಲಾಳ ರಸ್ತೆಯ ಮನೆಗೆ ಮಾಧವ್ ಹೋಗುವಾಗ, ಸುಪಾರಿ ಹಂತಕರು ಪೂರ್ವ ಸಂಚಿನಂತೆ ಬೈಕ್ ಹಾಗೂ ಆಟೋ ಮೂಲಕ ಹಿಂಬಾಲಿಸಿ ಚಾಕುವಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.
ಸುಪಾರಿ ಕೊಲೆಯ ಹಂತಕರಾದ ರಿಯಾಜ್ ಅಬ್ದುಲ್ ಶೇಖ್, ಶಹಬಾಜ್, ಶಾರುಖ್, ಆದಿಲ್ ಖಾನ್ ಹಾಗೂ ಸಲ್ಮಾನ್ ಎಂಬ ನಾಲ್ವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಗಳಾದ ಮಾಧವ ಅವರ ಸಹೋದರ ಶಿವರಾಮ್ ಪ್ರಸಾದ್ ಹಾಗೂ ಮಾಧವ ಕಿರಿಯ ಮಗ ಹರಿಕೃಷ್ಣ ತಲೆಮರೆಸಿಕೊಂಡಿದ್ದಾರೆ.
ಚಿಕ್ಕಪ್ಪನೊಂದಿಗೆ ಸೇರಿ ತಂದೆಯನ್ನೇ ಕೊಲ್ಲಿಸಿದ ಮಗ ಮೂಲತಃ ಬಳ್ಳಾರಿಯ ಮಾಧವ್ ಹಲವು ವರ್ಷಗಳಿಂದ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡದ್ದರು. 100 ಕೋಟಿ ಬೆಲೆ ಬಾಳುವ ಸಾವಿರ ಎಕರೆ ಭೂಮಿ ಖರೀದಿ ಮಾಡಿ, ಬಳ್ಳಾರಿ ಸ್ಟೀಲ್ ಅಲೈ ಲಿಮಿಟೆಡ್ ಎಂಬ ಕಂಪನಿ ಶುರು ಮಾಡಿದ್ದರು.
ಕೆಲ ವರ್ಷಗಳಿಂದ ಮೈನಿಂಗ್ ಬ್ಯುಸಿನೆಸ್ ಸ್ಥಗಿತವಾಗಿದ್ದರಿಂದ ನಷ್ಟ ಅನುಭವಿಸಿದ್ದ ಅವರು, ಕಂಪನಿಯ ನಿರ್ದೇಶಕರಾಗಿದ್ದ ಮಗ ಹರಿಕೃಷ್ಣ ಹಾಗೂ ತಮ್ಮ ಶಿವರಾಮ್ ಪ್ರಸಾದ್ ಎಂಬುವರು ಆಸ್ತಿ ಮಾರಾಟ ಮಾಡುವಂತೆ ಮಾಧವ್ಗೆ ಸೂಚಿಸಿದ್ದರು. ಅವರ ಸಲಹೆ ತಳ್ಳಿಹಾಕಿದ ತಂದೆಯ ಮೇಲೆ 2014ರಿಂದಲೇ ಮಗ ಕೊಲೆ ಮಾಡಲು ಯೋಜನೆ ರೂಪಿಸಿದ್ದ. ಇದಕ್ಕೆ ಚಿಕ್ಕಪ್ಪ ಸಾಥ್ ನೀಡಿದ್ದ.
ಎರಡು ಬಾರಿ ಕೊಲೆ ಸ್ಕೆಚ್ ಮಿಸ್ :ಮಾಧವ್ ವಿರುದ್ಧ ಹಗೆತನ ಸಾಧಿಸಿಕೊಂಡು ಬಂದಿದ್ದ ಇಬ್ಬರು ಹೇಗಾದ್ರೂ ಮಾಡಿ ಆಸ್ತಿ ಕಬಳಿಸಬೇಕೆಂದು ಸಂಚು ರೂಪಿಸಿ 2014ರಲ್ಲಿ ಅವರ ಮೇಲೆ ಆ್ಯಸಿಡ್ ಅಟ್ಯಾಕ್ ಮಾಡಿಸಿದ್ದರು. ಇದಕ್ಕೂ ಜಗ್ಗದಿದ್ದರಿಂದ ಹತ್ಯೆಗೆ ಯೋಜನೆ ರೂಪಿಸಿ ಕೊಲೆ ಮಾಡಲು ಹಂತಕರಿಗೆ ಸುಪಾರಿ ನೀಡಿದ್ದರು.
ಸುಪಾರಿ ಕಿಲ್ಲರ್ಗಳು ಜೆಸಿನಗರ, ಎಸ್ ಜೆ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ಯಿಯಲ್ಲಿ ಮಾಧವ್ ಮೇಲೆ ಅಟ್ಯಾಕ್ ಮಾಡಿದ್ರೂ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಕೊಲೆ ಮಾಡಿಸಲು ಮೊದಲ ಎರಡು ಸುಪಾರಿ ತಂಡಗಳು ವಿಫಲವಾಗಿದ್ದರಿಂದ 3ನೇ ಸುಪಾರಿ ತಂಡ ರಿಯಾಜ್ ನೇತೃತ್ವದ ಆರೋಪಿಗಳಿಗೆ ಕೊಲೆ ಮಾಡಲು ತಿಳಿಸಿ ₹25 ಲಕ್ಷ ನೀಡುವುದಾಗಿ ಆರೋಪಿಗಳು ಮಾತುಕತೆ ನಡೆಸಿದ್ದರು.
ಕೊಲೆ ಮಾಡಲು ರಿಯಾಜ್ ಒಪ್ಪಿ ಸಹಚರರಿಗೆ ತಲಾ ಐದು ಲಕ್ಷ ನೀಡುವುದಾಗಿ ಹೇಳಿ ಹತ್ಯೆ ಮಾಡಲು ಸ್ಕೆಚ್ ರೂಪಿಸಿದ್ದರು. ಪಕ್ಕಾ ಪ್ಲಾನ್ ಮಾಡಿ ಮಾಧವ್ ಅವರನ್ನು ಹಿಂಬಾಲಿಸಿ ಹರಿತ ಚಾಕುವಿನಿಂದ ಅವರ ಕುತ್ತಿಗೆ ಕೊಯ್ದು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ನಗರ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸಫೆಟ್ ನೇತೃತ್ವದ ತಂಡ ಪಾಂಡಿಚೇರಿ, ಅನಂತಪುರ, ಬಳ್ಳಾರಿ, ಗೋವಾ ಸೇರಿ ಹಲವು ಕಡೆಗಳಲ್ಲಿ ಸುತ್ತಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.