ಬೆಂಗಳೂರು:ಹಳೆ ದ್ವೇಷದ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗಜೇಂದ್ರ ಸಹಚರರಾದ ರವಿ, ಶಶಿಧರ್ ಹಾಗೂ ನವೀನ್ ಬಂಧಿತ ಆರೋಪಿಗಳು. ಇದೇ ಠಾಣೆಯ ರೌಡಿಶೀಟರ್ ಆಗಿದ್ದ ಸುಬ್ರಮಣ್ಯ ಎಂಬಾತನನ್ನು ಆರೋಪಿಗಳು ಜೂ.26 ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ಕ್ರಿಕೆಟ್ ಆಡುವ ವಿಚಾರವಾಗಿ ಗಜೇಂದ್ರ ಕಡೆ ಸೇರಿದ ವ್ಯಕ್ತಿಗೆ ಸುಬ್ರಮಣ್ಯ ಧಮ್ಕಿ ಹಾಕಿದ್ದ. ಇದೇ ವಿಚಾರ ಗಜೇಂದ್ರ ಕಿವಿಗೆ ಬೀಳುತ್ತಿದ್ದಂತೆ ಸುಬ್ರಮಣ್ಯನನ್ನು ಒಂದು ಗತಿ ಕಾಣಿಸಬೇಕು ಎಂದು ಫ್ಲಾನ್ ಮಾಡಿ ಮತ್ತೊಬ್ಬ ಆರೋಪಿ ರವಿ ಮೂಲಕ ಮೀನುಕುಂಟೆ ಬಳಿ ಜೂ.26ರ ಸಂಜೆ ಸುಬ್ರಮಣ್ಯನನ್ನು ಕರೆಸಿಕೊಂಡು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸುಬ್ರಮಣ್ಯ ಮರು ದಿನ ಮೃತಪಟ್ಟಿದ್ದ.
ಸದ್ಯ ಬಂಧಿತ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರದ ಈಶಾನ್ಯ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.