ಕರ್ನಾಟಕ

karnataka

ETV Bharat / state

ಸಾಲಕ್ಕೆ ಪ್ರತಿಯಾಗಿ ಮೊಬೈಲ್ ಕಿತ್ತಿಟ್ಟುಕೊಂಡ ಯುವಕನ ಹತ್ಯೆ: ಪೊಲೀಸರಿಗೆ ಶರಣಾದ ಆರೋಪಿಗಳು - ಪೊಲೀಸರಿಗೆ ಶರಣಾದ ಆರೋಪಿಗಳು

ಸೆ.17 ಮಧ್ಯಾಹ್ನ ಸಂಪಿಗೆ ಹಳ್ಳಿಯ ಅರ್ಕಾವತಿ ಲೇಔಟ್​ನಲ್ಲಿ ಫಾರೂಕ್ ಖಾನ್ ಎಂಬಾತನನ್ನು ಚಾಕುವಿನಿಂದ ಇರಿದು ಹತ್ಯೆಗೈಯ್ಯಲಾಗಿತ್ತು. ಪ್ರಕರಣ ಸಂಬಂಧ ಮೂವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ.

Murder accused
ಪೊಲೀಸರಿಗೆ ಶರಣಾದ ಆರೋಪಿಗಳು

By ETV Bharat Karnataka Team

Published : Sep 19, 2023, 1:15 PM IST

ಬೆಂಗಳೂರು: ಸಾಲಕ್ಕೆ ಪ್ರತಿಯಾಗಿ ಮೊಬೈಲ್ ಕಿತ್ತಿಟ್ಟುಕೊಂಡ ಯುವಕನನ್ನು ಹತ್ಯೆಗೈದಿದ್ದ ಆರೋಪಿಗಳು ಸಂಪಿಗೆಹಳ್ಳಿ ಠಾಣೆಗೆ ಶರಣಾಗಿದ್ದಾರೆ. ಫಾರೂಕ್ ಖಾನ್ ಕೊಲೆಯಾದ ಯುವಕ. ಸುಹೈಲ್ ಖಾನ್, ಮುಬಾರಕ್ ಹಾಗೂ ಅಲಿ ಅಕ್ರಂ ಕೊಲೆ ಆರೋಪಿಗಳು.

ಪ್ರಕರಣದ ಸಂಪೂರ್ಣ ವಿವರ: ಭಾನುವಾರ(ಸೆ.17) ಮಧ್ಯಾಹ್ನ ಸಂಪಿಗೆಹಳ್ಳಿಯ ಅರ್ಕಾವತಿ ಲೇಔಟ್​ನಲ್ಲಿ ಫಾರೂಕ್ ಖಾನ್ ಎಂಬಾತನನ್ನು ಚಾಕುವಿನಿಂದ ಇರಿದು ಹತ್ಯೆಗೈಯ್ಯಲಾಗಿತ್ತು. ಕೊಲೆಯಾದ ಫಾರೂಕ್ ಖಾನ್​ನಿಂದ ಸುಹೈಲ್ ಖಾನ್ 10 ಸಾವಿರ ರೂ. ಸಾಲ ಪಡೆದಿದ್ದನಂತೆ. ಸಾಲ ವಾಪಸ್‌ ಕೊಡುವುದು ವಿಳಂಬವಾದಾಗ ಸುಹೈಲ್​ನ ಮೊಬೈಲ್ ಫೋನ್‌ನನ್ನು ಫಾರೂಕ್ ಹಾಗೂ ಆತನ ಸ್ನೇಹಿತ ಸದ್ದಾಂ ಕಿತ್ತಿಟ್ಟುಕೊಂಡಿದ್ದರಂತೆ. ಅಲ್ಲದೇ ನೀನು ಹಣ ಕೊಡದಿದ್ದರೆ ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ಸುಹೈಲ್​ಗೆ ಫಾರೂಕ್ ಎಚ್ಚರಿಕೆ ನೀಡಿದ್ದನಂತೆ.

ಮೊಬೈಲ್ ಫೋನ್‌ನಲ್ಲಿ ಸುಹೈಲ್ ತಾಯಿಯ ಫೋಟೋ ಇತ್ತು. ಆದ್ದರಿಂದ ಮೊಬೈಲ್ ಹಿಂದಿರುಗಿಸುವಂತೆ ಸುಹೈಲ್ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದನಂತೆ. ಆದರೆ ಮೊಬೈಲ್ ಕೊಡದೇ ಫಾರೂಕ್ ಆಟವಾಡಿಸುತ್ತಿದ್ದನಂತೆ. ಹೀಗಾಗಿ ಭಾನುವಾರ ವಾರ್ನಿಂಗ್ ಕೊಡುವ ಸಲುವಾಗಿ ಫಾರೂಕ್​ನನ್ನು ಸುಹೈಲ್ ಖಾನ್ ಹಾಗೂ ಇತರೆ ಆರೋಪಿಗಳು ಆಟೋದಲ್ಲಿ ಅರ್ಕಾವತಿ ಲೇಔಟಿಗೆ ಕರೆದೊಯ್ದಿದ್ದರು.

ಅಲ್ಲಿ ಆರೋಪಿಗಳು ಹೆದರಿಸಲೆಂದು ಫಾರೂಕ್​ನ ಕೈಗೆ ಚಾಕುವಿನಿಂದ ಇರಿದಿದ್ದರು. ಬಳಿಕ ಫಾರೂಕ್ ಪ್ರತಿರೋಧಿಸಿದಾಗ ಕೈ ತಪ್ಪಿ ಚಾಕು ಆತನ ಕುತ್ತಿಗೆ ಸೀಳಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಫಾರೂಕ್ ನರಳಾಡುತ್ತಿದ್ದ. ಆದರೆ ಆತ ಬದುಕಿದರೆ ತಮ್ಮ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗುತ್ತದೆ ಎಂದು ತಿಳಿದ ಆರೋಪಿಗಳು ಆತನನ್ನ ಹತ್ಯೆಗೈದಿದ್ದರು.

ಸುಹೈಲ್ ಮತ್ತಿತರರೊಂದಿಗೆ ತೆರಳಿದ್ದ ತನ್ನ ಸಹೋದರ ಫಾರೂಕ್ ಕಾಣೆಯಾಗಿದ್ದಾನೆ ಎಂದು ಆತನ ಸಹೋದರ ಶಬ್ಬೀರ್ ಅಹಮದ್ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ದೂರಿನ ಬೆನ್ನಲ್ಲೇ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಆರೋಪಿಗಳನ್ನ ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಂಪಿಗೆಹಳ್ಳಿ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ನೇಹಿತನ ಹತ್ಯೆಗೆ ಸಂಚು ರೂಪಿಸಿದ್ದ ಕಿರಾತಕರು: ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಇತ್ತೀಚೆಗೆ ಸೆರೆಹಿಡಿದಿದ್ದರು. ಮೊಹಮ್ಮದ್ ಜುಬೇರ್ ಹಾಗೂ ಪುರ್ಕಾನ್ ಆಲಿಖಾನ್ ಬಂಧಿತ ಆರೋಪಿಗಳು. ಇವರು ರೌಡಿಶೀಟರ್ ಅನೀಸ್ ಎಂಬಾತನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು.

ಅನೀಸ್ ಹಾಗೂ ಇಬ್ಬರು ಆರೋಪಿಗಳು ಸ್ನೇಹಿತರಾಗಿದ್ದಾರೆ. ಮೂವರು ಸಹ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಮೂವರ ನಡುವೆ ಹಣಕಾಸಿನ ವಿಚಾರಕ್ಕಾಗಿ ವೈಮನಸ್ಸು ಮೂಡಿತ್ತು. 2021ರಲ್ಲಿ ಪ್ರಕರಣವೊಂದರ ಸಂಬಂಧ ಅನೀಸ್ ಜೈಲು ಸೇರಿದ್ದ. ಇದೇ ವೇಳೆ‌ ಬಂಧಿತ ಆರೋಪಿಗಳ ಸಹಚರನಾಗಿದ್ದ ಆಲಿ ಎಂಬಾತನ ಕೊಲೆಯಾಗಿತ್ತು. ಅನೀಸ್ ಜೈಲಿನಲ್ಲಿದ್ದುಕೊಂಡೇ ಆಲಿನನ್ನು ಕೊಲೆ ಮಾಡಿಸಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ಆರೋಪಿಗಳು ಅನೀಸ್​ನ ಹತ್ಯೆ‌ ಮಾಡಲು‌ ಒಂದು ತಿಂಗಳಿಂದ ಸಂಚು‌ ರೂಪಿಸಿ ಕೊಂಡಿದ್ದರು.

ಇದನ್ನೂ ಓದಿ:ಬೆಂಗಳೂರಲ್ಲಿ ಸ್ನೇಹಿತನ ಹತ್ಯೆಗೆ ಸಂಚು ರೂಪಿಸಿದ್ದ ಕಿರಾತಕರು.. ಪೊಲೀಸರ ಕಾರ್ಯಾಚರಣೆಯಿಂದ ತಪ್ಪಿತು ಕೊಲೆ ಸ್ಕೆಚ್​

ABOUT THE AUTHOR

...view details