ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆ, ಆರೋಪಿ ಅರೆಸ್ಟ್ ಯಲಹಂಕ(ಬೆಂಗಳೂರು): ಪ್ರೀತಿ ನಿರಾಕರಿಸಿದ ಯುವತಿಯನ್ನು ಹತ್ಯೆಗೈದು ಪರಾರಿಗೆ ಯತ್ನಿಸಿದ ಆರೋಪಿಯನ್ನು ರಾಜಾನುಕುಂಟೆ ಪೊಲೀಸರು ನಿನ್ನೆ(ಮಂಗಳವಾರ) ಸಂಜೆ ಬಂಧಿಸಿದ್ದಾರೆ. ಮಧುಚಂದ್ರ (25) ಬಂಧಿತ ಆರೋಪಿ. ಶಾನುಭೋಗನ ಹಳ್ಳಿಯ ರಾಶಿ (19) ಕೊಲೆಯಾದ ಯುವತಿ. ತೋಟಕ್ಕೆ ಹುಲ್ಲು ತರಲು ಹೋಗುತ್ತಿದ್ದ ಯುವತಿಯ ಹಿಂಬಾಲಿಸಿ ಬಂದಿದ್ದ ದುಷ್ಕರ್ಮಿ ಚಾಕುವಿನಿಂದ ಆಕೆಯ ಕತ್ತು ಸೀಳಿ ಕೊಲೆಗೈದು ಪರಾರಿಯಾಗಿದ್ದ. ಯಲಹಂಕ ತಾಲೂಕಿನ ರಾಜಾನುಕುಂಟೆ ಬಳಿಯ ಶಾನುಭೋಗನಹಳ್ಳಿ ಬಳಿ ನಿನ್ನೆ(ಮಂಗಳವಾರ) ಸಂಜೆ 5 ಗಂಟೆಯ ಸಮಯದಲ್ಲಿ ಘಟನೆ ನಡೆದಿತ್ತು.
ಪ್ರೀತಿಸುವಂತೆ ಕಾಡುತ್ತಿದ್ದ ಆರೋಪಿ: ಕೊಲೆಯಾದ ಯುವತಿ ರಾಶಿ ಯಲಹಂಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಎ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿಗೆ ರಜೆ ಇದ್ದ ಸಮಯದಲ್ಲಿ ಸೀಬೆ ಹಣ್ಣು ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದಳು. ಕಳೆದ ಮೂರು ವರ್ಷಗಳ ಹಿಂದೆ ಸೀಬೆ ಹಣ್ಣು ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಸಮಯದಲ್ಲಿ ಆರೋಪಿ ಮಧುಚಂದ್ರನ ಪರಿಚಯವಾಗಿತ್ತು. ಟೆಂಪೋ ಡ್ರೈವರ್ ಆಗಿದ್ದ ಮಧುಚಂದ್ರ ಸೀಬೆ ಹಣ್ಣು ಬಾಕ್ಸ್ಗಳನ್ನ ತೆಗೆದುಕೊಂಡು ಹೋಗಲು ತೋಟಕ್ಕೆ ಬರುತ್ತಿದ್ದ. ಈ ವೇಳೆ ಇಬ್ಬರಿಗೂ ಪರಿಚಯವಾಗಿದ್ದು, ಆತ್ಮೀಯತೆ ಇತ್ತು ಎನ್ನಲಾಗಿದೆ.
ಆದರೆ ಈ ನಡುವೆ ಆರೋಪಿ ಮಧುಚಂದ್ರನಿಗೆ ಮದುವೆಯಾಗಿದ್ದು, ಒಂದು ಮಗು ಸಹ ಇತ್ತು. ಹೀಗಿದ್ದರೂ ಪ್ರೀತಿಸುವಂತೆ ಕಾಡುತ್ತಿದ್ದನಂತೆ. ಮದುವೆಯಾದ ವಿಚಾರ ತಿಳಿದ ಯುವತಿ ಆರೋಪಿಯನ್ನು ದೂರ ಮಾಡಿದ್ದಳಂತೆ. ಇದೇ ಕಾರಣಕ್ಕೆ ಕೋಪಗೊಂಡು ನಿನ್ನೆ ತೋಟದಲ್ಲಿ ಅಡ್ಡಹಾಕಿ ಯುವತಿಯ ಕತ್ತುಕೊಯ್ದು ಪರಾರಿಯಾಗಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಘಟನೆ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ಯುವತಿಯ ಬರ್ಬರ ಹತ್ಯೆ
ಕೊಲೆ ಬೆದರಿಕೆ ಹಾಕಿದ್ದ ಆರೋಪಿ: ಮಧುಚಂದ್ರ ಮದುವೆಯಾಗಿರುವ ವಿಷಯ ಗೊತ್ತಾದ ಬಳಿಕ ರಾಶಿ ಆತನಿಂದ ದೂರವಾಗಿದ್ದಳು. ಆತನ ಪ್ರೀತಿಯನ್ನ ನಿರಾಕರಿಸಿದ್ದಳು. ಇದರಿಂದ ಕೆರಳಿದ ಮಧುಚಂದ್ರು ಒಂದೂವರೆ ತಿಂಗಳ ಹಿಂದೆ ಮನೆಗೆ ಬಂದು ಕೊಲೆ ಬೆದರಿಕೆ ಹಾಕಿದ್ದನಂತೆ. ಆದರೆ ಆತ ಕೊಲೆ ಮಾಡುತ್ತಾನೆ ಎಂಬ ಸಂಶಯವೇ ಇರಲಿಲ್ಲ ಎಂದು ಮೃತ ಯುವತಿಯ ಚಿಕ್ಕಪ್ಪ ನಾರಾಯಣಪ್ಪ ಹೇಳಿದ್ದಾರೆ.
ಯುವತಿ ಕೊಲೆ ಬಗ್ಗೆ ಎಸ್ಪಿ ಪ್ರತಿಕ್ರಿಯೆ: ನಿನ್ನೆ ಸಂಜೆ ದಿಬ್ಬೂರು ಬಳಿಯ ಖಾಸಗಿ ಲೇಔಟ್ ನಲ್ಲಿ ಯುವತಿಯನ್ನು ಚೂರಿಯಿಂದ ಇರಿದು ಕೊಲೆಗೈದ ಬಗ್ಗೆ ಮಾಹಿತಿ ಬಂದಿತ್ತು. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಲಾಯಿತು. ಇನ್ನು ಯುವತಿ ಕೊಲೆಯಾದ ಸ್ಥಳದಲ್ಲಿ ಚಾಕು ಹಾಗೂ ಬ್ಲೂಟೂತ್ ಡಿವೈಸ್ ಸಿಕ್ಕಿತ್ತು.ಇದರ ಜಾಡು ಹಿಡಿದು ಆರೋಪಿ ಮಧುಚಂದ್ರ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಮಧುಚಂದ್ರ ಆಂಧ್ರ ಮೂಲದವನಾಗಿದ್ದು, ಯಲಹಂಕದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ. ಇದೇ ವೇಳೆ, ಕಾಲೇಜಿಗೆ ಬರುತ್ತಿದ್ದ ರಾಶಿಯನ್ನು ತನ್ನ ಪ್ರೀತಿ ಬಲೆಗೆ ಬೀಳಿಸಿದ್ದ. ಬಳಿಕ ರಾಶಿಗೆ ಮಧುಚಂದ್ರನಿಗೆ ಈಗಾಗಲೇ ಮದುವೆಯಾಗಿ ಮಗು ಇರುವುದು ಗೊತ್ತಾಗಿದೆ. ಇದರಿಂದಾಗಿ ಮಧುಚಂದ್ರನಿಂದ ದೂರವಾಗಲು ಯತ್ನಿಸಿದ್ದಾಳೆ. ಹೀಗಾಗಿ ರಾಶಿಯನ್ನ ಕೊಲೆ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.
ಕುಟುಂಬಕ್ಕೆ ಆಧಾರವಾಗಿದ್ದ ಯುವತಿ: ವೆಂಕಟಚಾಲಯ್ಯ ಮತ್ತು ಸುಶೀಲಮ್ಮ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಕೊಲೆಯಾದ ರಾಶಿ ಕಿರಿಯ ಮಗಳು. ಆಕೆಗೆ ಹಿರಿಯ ಸಹೋದರಿ ಇದ್ದಾಳೆ. ತಂದೆ ವೆಂಕಟಚಾಲಯ್ಯ ತೀರಿಕೊಂಡ ನಂತರ ಮನೆಯ ಜವಾಬ್ದಾರಿ ರಾಶಿಯ ಹೆಗಲಿಗೆ ಬಿತ್ತು. ಪಿಯುಸಿ ಓದುತ್ತಿರುವಾಗಲೇ ರಾಶಿ ಸೀಬೆ ತೋಟದ ಕೆಲಸಕ್ಕೆ ಹೋಗಿ ಕುಟುಂಬದ ನಿರ್ವಹಣೆ ಮಾಡುತ್ತಿದ್ದಳು. ಪದವಿ ಮುಗಿಸಿದ ನಂತರ ಕುಟುಂಬಕ್ಕೆ ಆಧಾರವಾಗುತ್ತಾಳೆ ಎಂಬ ನಿರೀಕ್ಷೆ ಇತ್ತು. ಆದರೆ ಪಾಗಲ್ ಪ್ರೇಮಿಯ ಹುಚ್ಚಾಟದಿಂದ ಕುಟುಂಬದ ಆಧಾರಸ್ತಂಭವೇ ಇಲ್ಲದಂತಾಗಿದೆ.
ಇದನ್ನೂ ಓದಿ:ಹಾಸನದಲ್ಲಿ ಹಳೇ ದ್ವೇಷಕ್ಕೆ ಯುವಕನ ಕೊಲೆ: ಬೆಂಗಳೂರಿನಲ್ಲಿ ಬಾಮೈದುನನ ಹತ್ಯೆ ಆರೋಪಿ ಸೆರೆ