ಬೆಂಗಳೂರು:ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಗೆ ಅವರ ನಿವಾಸಕ್ಕೆ ತೆರಳಿದ್ದ ಅನರ್ಹ ಶಾಸಕ ಮುನಿರತ್ನ ಸಿಎಂ ಜೊತೆ ಚರ್ಚಿಸಲು ಸಾಧ್ಯವಾಗದ ಕಾರಣ ಆರ್.ಅಶೋಕ್ ಹಾಗೂ ವಿಜಯೇಂದ್ರ ಜೊತೆ ಮಾತುಕತೆ ನಡೆಸಿ ವಾಪಸಾಗುವ ವೇಳೆ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.
ನಾವೆಲ್ಲಾ ಜೀವಂತವಾಗೇ ಇದ್ದೇವೆ, ಗೋರಿಗಳಾಗಿಲ್ಲ: ಡಿಕೆಶಿಗೆ ಮುನಿರತ್ನ ತಿರುಗೇಟು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೋರಿಗಳು ಕಟ್ಟಿದ್ದಾರೆ ಎಂಬ ಹೇಳಿಕೆ ನೋಡಿದ್ದೇವೆ. ಗೋರಿಗಳು ಎಲ್ಲಿವೆ ಅಂತಾ ಗೊತ್ತಾದರೆ ನಾವೂ ಅವರ ಜೊತೆಗೆ ಹೋಗುತ್ತೇವೆ. ಜೀವಂತವಾಗಿರುವಾಗ ಗೋರಿಗಳ ಪ್ರಶ್ನೆ ಬರೋದಿಲ್ಲ. ನಾವೆಲ್ಲಾ ಜೀವಂತವಾಗೇ ಇದ್ದೇವೆ. ಗೋರಿಗಳಾಗಿಲ್ಲ ಎಂದು ತಿರುಗೇಟು ನೀಡಿದರು.
ಇನ್ನು ಫೋನ್ ಟ್ಯಾಪಿಂಗ್ ಪ್ರಕರಣ ಸಿಬಿಐ ತನಿಖೆಗೆ ಕೊಟ್ಟಿರುವುದನ್ನು ನಾನು ಸ್ವಾಗತಿಸುತ್ತೇನೆ. ಹಲವರ ಫೋನ್ ಟ್ಯಾಪಿಂಗ್ ಆಗುತ್ತಿದ್ದದ್ದು, ಎಲ್ಲರಿಗೂ ಗೊತ್ತಿತ್ತು. ಆದ್ರೆ ಮೊದಲು ದಾಖಲೆ ಇರಲಿಲ್ಲ. ಈಗ ಫೋನ್ ಟ್ಯಾಪಿಂಗ್ಗೆ ದಾಖಲೆ ಸಿಕ್ಕಿದೆ. ನಾವೇನು ಉಗ್ರಗಾಮಿಗಳಲ್ಲ. ದೇಶದ್ರೋಹಿಗಳಲ್ಲ. ನಮ್ಮ ಫೋನ್ ಕದ್ದಾಲಿಕೆ ಮಾಡಿದ್ರೂ ಮಾಡಲಿ ಬಿಡಿ ಎಂದರು.
ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, ಯಾರಿಗೆ ಸಂಖ್ಯಾಬಲ ಇದೆಯೋ ಅವರು ಆಗುತ್ತಾರೆ ಎನ್ನುವ ಮೂಲಕ ಬಿಜೆಪಿಗೆ ಈ ಬಾರಿ ಆಡಳಿತ ಸಿಗುವ ಬಗ್ಗೆ ಬೆಂಬಲ ವ್ಯಕ್ತಪಡಿಸಿದರು. ನಾಲ್ಕು ವರ್ಷದ ಹಿಂದೆನೇ ಬಿಜೆಪಿಯವರೇ ಮೇಯರ್ ಆಗ್ಬೇಕಿತ್ತು ಎಂದರು.