ಬೆಂಗಳೂರು: ಎಲ್ಲಿ ಮತದಾರರ ಪಟ್ಟಿ ಡಿಲೀಟ್ ಆಗಿರುವುದು, ಸೇರ್ಪಡೆ ಆಗಿರುವುದೆಂದು ಸರಿಯಾದ ಮಾಹಿತಿ ಕೊಡಿ ಸಂಸದ ಡಿ.ಕೆ.ಸುರೇಶ್ ಅವರೇ, ಸಂಸದ ಸ್ಥಾನಕ್ಕೆ ಘನತೆ ತರುವಂತೆ ಮಾತನಾಡಿ ಎಂದು ತೋಟಗಾರಿಕೆ ಸಚಿವ ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಕಾಸಸೌಧದಲ್ಲಿ ಇಂದು ತುರ್ತು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ನಿಮ್ಮ ಜೊತೆ ನಾನು ಇದ್ದಾಗ ಯಾವುದೂ ಸೇರ್ಪಡೆ, ಡಿಲೀಟ್ ಆಗಿರಲಿಲ್ಲ. ನಿಮ್ಮ ಜೊತೆ ಇದ್ದಾಗ ನಾನು ಬಹಳ ಪವಿತ್ರವಾಗಿದ್ದೆ, ಈಗ ಅಪವಿತ್ರನಾಗಿದ್ದೇನಾ ಎಂದು ಡಿ.ಕೆ.ಸುರೇಶ್ ಅವರಿಗೆ ಮುನಿರತ್ನ ತಿರುಗೇಟು ನೀಡಿದ್ದಾರೆ.
ನಾನು ಅಂತಹ ಕೀಳು ರಾಜಕಾರಣ ಮಾಡಲ್ಲ. ಡಿ.ಕೆ.ಸುರೇಶ್ ಮೊದಲು ಕ್ಷೇತ್ರಕ್ಕೆ ಕೊಟ್ಟಿರುವ ಕೆಲಸದ ಮಾಹಿತಿ ಕೊಡಲಿ. ಮತದಾರರ ಪಟ್ಟಿ ಡಿಲೀಟ್ ಮಾಡುವಷ್ಟು ಕೀಳು ಮಟ್ಟ ನನ್ನದಲ್ಲ. ತೇಜೋವಧೆ ಮಾಡಿ ಗೆಲ್ತೀನಿ ಅನ್ನೋದನ್ನು ಬಿಟ್ಟುಬಿಡಿ. ಬನ್ನಿ ಜನರ ಮುಂದೆ ಹೋಗೋಣ ಎಂದು ಸವಾಲು ಹಾಕಿದ ಸಚಿವರು, ಮತದಾರರ ಪಟ್ಟಿ ಸೇರ್ಪಡೆ, ಡಿಲೀಟ್ ನಿಮ್ಮ ರೂಡಿ, ನನ್ನದಲ್ಲ. ನಿಮಗೆ ಅಂತಹ ಅಭ್ಯಾಸಗಳಿವೆ. ಎಂಪಿ ಅಂತಾ ಬಾಯಿಗೆ ಬಂದಂತೆ ಮಾತನಾಡುವುದಲ್ಲ. ಸಣ್ಣತನದ ರಾಜಕೀಯ ಬಿಟ್ಟು ಜೀವನ ಮಾಡಿ ಎಂದು ಸಚಿವ ಮುನಿರತ್ನ ವಾಗ್ದಾಳಿ ನಡೆಸಿದರು.
ಬಹಿರಂಗ ಸವಾಲು: ಮಲ್ಲೇಶ್ವರಂನಲ್ಲಿ ನನ್ನದು ಐದನೇ ತಲೆಮಾರು, ಸ್ವಲ್ಪ ಗೊತ್ತಿರಲಿ. ನಿಮಗೆ ಗೊತ್ತಿರದಿದ್ದರೆ ನಿಮ್ಮ ಅಣ್ಣನನ್ನು ಕೇಳಿ. ನಿಮಗಿಂತ ಮೊದಲೇ ಅವರು ಬೆಂಗಳೂರಿಗೆ ಬಂದಿದ್ದಾರೆ. ನಾನು ಮಲ್ಲೇಶ್ವರದಲ್ಲೇ ಹುಟ್ಟಿದ್ದು, ಚುನಾವಣೆಗೆ ನಾಮಪತ್ರ ಸಲ್ಲಿಸುತ್ತೇನೆ. ಆದರೆ, ನಾನು ಕ್ಷೇತ್ರದಲ್ಲಿ ಓಡಾಡಲ್ಲ, ಮತಯಾಚನೆ ಮಾಡಲ್ಲ, ನೀವು ಅದೇ ರೀತಿ ಮಾಡಿ, ಜನರ ತೀರ್ಮಾನಕ್ಕೆ ಬಿಡೋಣ. ಯಾರಿಗೆ ಮತ ಹಾಕುತ್ತಾರೆ ನೋಡೊಣ ಎಂದು ಇದೇ ವೇಳೆ ಬಹಿರಂಗ ಸವಾಲು ಕೂಡಾ ಹಾಕಿದರು.
ನಿಮ್ಮ ಇಂತಹ ಮಾತುಗಳಿಂದಲೇ ಕಾಂಗ್ರೆಸ್ಗೆ ಇಂದು ಈ ಸ್ಥಿತಿ ಬಂದಿದೆ. 17 ಜನ ಒಟ್ಟಿಗೆ ಪಕ್ಷ ಬಿಟ್ಟಿರುವುದು ಇದೇ ಕಾರಣಕ್ಕೆ. ಬೆಂಗಳೂರು ನಗರಕ್ಕೆ ಇವರ ಕೊಡುಗೆ ಏನಿದೆ? ರಾಜರಾಜೇಶ್ವರಿ ನಗರಕ್ಕೆ ಇವರ ಕೊಡುಗೆ ಏನಿದೆ? ಬೆಂಗಳೂರು ಹಾಳು ಮಾಡುವುದಕ್ಕೆ ಬರುತ್ತಿದ್ದಾರೆ. ಇಷ್ಟು ಸಣ್ಣ ಜನ ಅಂತಾ ನನಗೆ ಗೊತ್ತಿರಲಿಲ್ಲ ಎಂದು ಡಿ.ಕೆ.ಸುರೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.