ಬೆಂಗಳೂರು:ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಗೆ ಕಾರಣರಾದವರಲ್ಲಿ ಒಬ್ಬರಾದ ಮುನಿರತ್ನಗೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗುವ ಭಾಗ್ಯ ಒದಗಿ ಬಂದಿದೆ. ಈ ಹಿಂದೆ ಬಿಎಸ್ವೈ ಸರ್ಕಾರದ ಆಡಳಿತದಲ್ಲಿ ಮುನಿರತ್ನಗೆ ಸಚಿವ ಸ್ಥಾನ ಲಭಿಸಿರಲಿಲ್ಲ.
ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದಿಂದ 2013 ಮತ್ತು 2018ರಲ್ಲಿ ಕಾಂಗ್ರೆಸ್ನಿಂದ ಗೆಲುವು ಸಾಧಿಸಿ 2019ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಗಾಗಿ ರಾಜೀನಾಮೆ ನೀಡಿದ 17 ಶಾಸಕರ ಪೈಕಿ ಒಬ್ಬರಾದ ಮುನಿರತ್ನಗೆ ಇದೀಗ ಸಚಿವ ಸ್ಥಾನ ಲಭಿಸಿದೆ. ಉಪಚುನಾವಣೆ ನಡೆದದ್ದೇ ತಡವಾಗಿದ್ದ ಜೊತೆಗೆ ಅವರ ವಿರುದ್ಧ ಇದ್ದ ಪ್ರಕರಣ ಸಚಿವ ಸ್ಥಾನಕ್ಕೇರಲು ತೊಡಕಾಗಿತ್ತು. ಆದರೆ ಇದೀಗ ಅವರನ್ನು ಸಚಿವ ಸ್ಥಾನವು ಅರಸಿ ಬಂದಿದೆ.
ಮೂಲತಃ ಚಿತ್ರರಂಗದ ಸಂಪರ್ಕದಿಂದ ಗುರುತಿಸಿಕೊಂಡಿರುವ ಮುನಿರತ್ನ, ಹಲವು ಜನಪ್ರಿಯ ಚಿತ್ರಗಳಿಗೆ ನಿರ್ಮಾಪಕರಾಗಿದ್ದಾರೆ. ರಾಜರಾಜೇಶ್ವರಿನಗರದಲ್ಲಿ ಬಿಬಿಎಂಪಿ ಚುನಾವಣೆ ಮೂಲಕ ಬೆಳೆದು ಬಂದು ಶಾಸಕರಾದ ಇವರು, ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ. ಮೊದಲೆರಡು ಸಲ ಕಾಂಗ್ರೆಸ್ನಿಂದ ಗೆದ್ದು, ನಂತರ ಬಿಜೆಪಿಯಿಂದ ಸ್ಪರ್ಧಿಸಿ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ.
ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ವಿರುದ್ಧ 58 ಸಾವಿರಕ್ಕೂ ಅಧಿಕ ಮತಗಳ ಗೆಲುವು ಸಾಧಿಸಿದ್ದರೂ, ಹಿಂದೆ ಬಿಬಿಎಂಪಿ ವಿಚಾರವಾಗಿ ಲೋಕಾಯುಕ್ತ ದಾಳಿ, ಚುನಾವಣೆ ವೇಳೆ ನಕಲಿ ಗುರುತಿನ ಚೀಟಿ ಸಿಕ್ಕ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ಇವರ ವಿರುದ್ಧ ಇದ್ದ ಕಾರಣ, ಸಚಿವ ಸ್ಥಾನ ಸಿಕ್ಕಿರಲಿಲ್ಲ. ಕೊನೆಗೂ ಇವರ ಪ್ರಯತ್ನ ಫಲಕೊಟ್ಟಿದ್ದು, ಬಿಎಸ್ವೈ ತಮ್ಮ ಅಧಿಕಾರವಧಿಯಲ್ಲಿ ಮುನಿರತ್ನಗೆ ಸಚಿವ ಸ್ಥಾನ ನೀಡಲಾಗದಿದ್ದರೂ ಇದೀಗ ಅವಕಾಶ ಒದಗಿಬಂದಿದೆ.
ಇದನ್ನೂ ಓದಿ:ಐಸಿಸ್ ನಂಟು: ಉಳ್ಳಾಲ ಮಾಜಿ ಶಾಸಕ ಬಿಎಂ ಇದಿನಬ್ಬ ಮೊಮ್ಮಗ ಸೇರಿ ನಾಲ್ವರ ಬಂಧನ