ಕರ್ನಾಟಕ

karnataka

ಮುನಿರತ್ನ ಆಗಮಿಸುತ್ತಿದ್ದಂತೆ ಕಳೆಗಟ್ಟಿದ ಮತ ಎಣಿಕೆ ಕೇಂದ್ರ ; ಪ್ರಧಾನಿ, ಸಿಎಂ ಹಾಗೂ ಮುನಿರತ್ನ ಪರ ಜಯಘೋಷ

By

Published : Nov 10, 2020, 3:37 PM IST

ಪೊಲೀಸರು ಶಾಲೆಯ ಆವರಣದ ಪ್ರವೇಶದ್ವಾರ ಬಂದ್ ಮಾಡಿ ಕಾರ್ಯಕರ್ತರನ್ನು ಒಳಗೆ ಬರದಂತೆ ತಡೆದರು. ಮುನಿರತ್ನ ಪ್ರಮಾಣಪತ್ರ ಪಡೆದು ವಾಪಸ್ ಬರುವವರೆಗೂ ಅವರ ಅಭಿಮಾನಿಗಳು ಶಾಲಾ ಮುಖ್ಯದ್ವಾರದ ಹೊರಭಾಗದಲ್ಲಿ ನಿಂತು ಅವರ ಪರ ಘೋಷಣೆ ಕೂಗುತ್ತಿದ್ದರು..

ಮತ ಎಣಿಕೆ ಕೇಂದ್ರ
Munirathna

ಬೆಂಗಳೂರು :ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ ಮುನಿರತ್ನ ಮತ ಎಣಿಕೆ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಜಯಘೋಷ ಕೂಗಿ ಸ್ವಾಗತಿಸಿದರು.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಭಾರಿ ಅಂತರದಿಂದ ಗೆದ್ದ ಮುನಿರತ್ನ ಪ್ರಮಾಣಪತ್ರ ಸ್ವೀಕರಿಸುವ ಸಲುವಾಗಿ ರಾಜರಾಜೇಶ್ವರಿನಗರ ಕೆಂಚೇನಹಳ್ಳಿ ಮುಖ್ಯರಸ್ತೆಯಲ್ಲಿರುವ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ಆವರಣದ ಮತಗಟ್ಟೆ ಕೇಂದ್ರಕ್ಕೆ ಆಗಮಿಸುತ್ತಿದ್ದಂತೆ ಅವರೊಂದಿಗೆ ಆಗಮಿಸಿದ ಅಭಿಮಾನಿಗಳು ಮುನಿರತ್ನ ಜತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಬೋಲೋ ಭಾರತ್ ಮಾತಾಕಿ ಪೋಷಣೆ ಮುಗಿಲುಮುಟ್ಟಿತ್ತು.

ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಮುನಿರತ್ನ

ತಮ್ಮ ನಿವಾಸದಿಂದ ನೇರವಾಗಿ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಮುನಿರತ್ನ ಮತ ಕೇಂದ್ರದೊಳಗೆ ತೆರಳಿದರೆ ಕೋವಿಡ್​ ನಿಯಮಾವಳಿ ಹಿನ್ನೆಲೆ ವಿಧಿಸಿರುವ ನಿರ್ಬಂಧ ಪ್ರಕಾರ ಹಾಗೂ ಮತ ಕೇಂದ್ರದಿಂದ 100 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಿರುವ ಹಿನ್ನೆಲೆ ಮುನಿರತ್ನ ಅಭಿಮಾನಿಗಳಿಗೆ ಮುಖ್ಯದ್ವಾರದಿಂದ ಒಳಗೆ ಬರಲು ನಿರಾಕರಿಸಲಾಯಿತು.

ಪೊಲೀಸರು ಶಾಲೆಯ ಆವರಣದ ಪ್ರವೇಶದ್ವಾರ ಬಂದ್ ಮಾಡಿ ಕಾರ್ಯಕರ್ತರನ್ನು ಒಳಗೆ ಬರದಂತೆ ತಡೆದರು. ಮುನಿರತ್ನ ಪ್ರಮಾಣಪತ್ರ ಪಡೆದು ವಾಪಸ್ ಬರುವವರೆಗೂ ಅವರ ಅಭಿಮಾನಿಗಳು ಶಾಲಾ ಮುಖ್ಯದ್ವಾರದ ಹೊರಭಾಗದಲ್ಲಿ ನಿಂತು ಅವರ ಪರ ಘೋಷಣೆ ಕೂಗುತ್ತಿದ್ದರು.

ಆಗಮಿಸಿದ ಹತ್ತೇ ನಿಮಿಷಕ್ಕೆ ಗೆಲುವು ಘೋಷಣೆ :ಮತ ಎಣಿಕೆ ಕೇಂದ್ರದೊಳಗೆ ಮುನಿರತ್ನ ಪ್ರವೇಶಿಸಿದ 10 ನಿಮಿಷದ ನಂತರ 25ನೇ ಹಾಗೂ ಕೊನೆಯ ಸುತ್ತಿನ ಮತ ಎಣಿಕೆ ಫಲಿತಾಂಶ ಘೋಷಣೆಯಾಯಿತು. ಕಾಂಗ್ರೆಸ್​ಗೆ ರಾಜೀನಾಮೆ ಕೊಟ್ಟು ಉಪ ಚುನಾವಣೆ ನಡೆಯಲು ಕಾರಣರಾಗಿದ್ದ ಹಾಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ 59 ಸಾವಿರಕ್ಕೂ ಅಧಿಕ ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಯಿತು. ಪೊಲೀಸ್ ಬಿಗಿ ಭದ್ರತೆಯಲ್ಲಿ ಮುನಿರತ್ನ ಮತ ಎಣಿಕೆ ಕೇಂದ್ರದೊಳಗೆ ತೆರಳಿ ಪ್ರಮಾಣಪತ್ರ ಸ್ವೀಕರಿಸಿ ವಾಪಸ್ ತೆರಳಿದರು.

ಮುನಿರತ್ನರನ್ನು ಗೆಲ್ಲಿಸಿ ಕೊಟ್ಟರೆ ಅವರು ಕೇವಲ ಈ ಕ್ಷೇತ್ರದ ಶಾಸಕರಾಗಿ ಮಾತ್ರ ಇರುವುದಿಲ್ಲ, ನಿಮಗೆ ಸಚಿವರಾಗುತ್ತಾರೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಚಾರ ಸಭೆಯಲ್ಲಿ ತಿಳಿಸಿದ್ದರು. ಇದಕ್ಕೆ ಇದೀಗ ಮತದಾರರ ಬೆಂಬಲದ ಮುದ್ರೆಯೂ ಸಿಕ್ಕಿದೆ.

ABOUT THE AUTHOR

...view details