ಬೆಂಗಳೂರು:ಕೆಪಿಸಿಸಿ ಅಧ್ಯಕ್ಷರಿಗೆ ದೂರದೃಷ್ಟಿ ಇಲ್ಲ. ಜಾತಿ ಜಾತಿ ಅಂತ ಹೋದರೆ ಇವರು ಮುಖ್ಯಮಂತ್ರಿ ಆಗೋಕ್ಕೆ ಆಗುತ್ತಾ ಎಂದು ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ವಾಗ್ದಾಳಿ ನಡೆಸಿದರು.
ಆರ್.ಆರ್.ನಗರದಲ್ಲಿ ಮಾತನಾಡಿದ ಅವರು, ಹೀಗೆ ಜಾತಿ ಮುಂದಿಟ್ಕೊಂಡು ಹೋದ್ರೆ ಡಿಕೆಶಿ ಮುಖ್ಯಮಂತ್ರಿ ಆಗೋಕ್ಕೆ ಸಾಧ್ಯನೇ ಇಲ್ಲ. ಡಿಕೆಶಿ ನಾಡಪ್ರಭು ಕೆಂಪೇಗೌಡರ ಇತಿಹಾಸ ಓದ್ಕೊಂಡು ರಾಜಕಾರಣ ಮಾಡಲಿ. ಜಾತಿಗಳ ನಡುವೆ ಜಗಳ ತಂದಿಡೋರು ಮುಖ್ಯಮಂತ್ರಿ ಆಗಲ್ಲ. ಲಿಂಗಾಯತರನ್ನು ಒಡೆದಾಳಲು ಹೋಗಿ ಸರ್ಕಾರ ಕಳ್ಕೊಂಡ್ರು ಕಾಂಗ್ರೆಸ್ನವರು ಎಂದು ಕಿಡಿಕಾರಿದರು.
ಮುನಿರತ್ನ ಒಕ್ಕಲಿಗ ಮುಖಂಡರನ್ನು ಬೆಳೆಸಿಲ್ಲ ಎಂಬ ಕಾಂಗ್ರೆಸ್ಸಿಗರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದಾಗ ಈ ಮಾತುಗಳು ಬರಲಿಲ್ಲ. ಇದೇ ಡಿಕೆಶಿಯವರು ಕೆಂಪೇಗೌಡ ಅಧ್ಯಯನ ಪೀಠದ ಉದ್ಘಾಟಣೆ ದಿನ ನನ್ನನ್ನು ಹಾಡಿ ಹೊಗಳಿದ್ದಾರೆ. ಆವತ್ತು ಜಾತಿ ಬಗ್ಗೆ ಮಾತಾಡದಿರೋರು ಇವತ್ತು ಜಾತಿ ಬಗ್ಗೆ ಮಾತಾಡಿ ಸ್ವಾರ್ಥ ತೋರಿದ್ದಾರೆ. ಸಿಎಂ ಆಗೋಕೆ ಇರೋರು ಇಷ್ಟು ಸಣ್ಣ ಮಟ್ಟದಲ್ಲಿ ಮಾತಾಡಿದ್ದು ಸರಿಯಲ್ಲ. ಡಿಕೆಶಿ ಜಾತಿ ಬಗ್ಗೆ ಮಾತಾಡಿ ಸಣ್ಣತನ ತೋರಿದ್ದಾರೆ ಎಂದು ತಿಳಿಸಿದರು.
ಡಿಕೆಶಿ ಜಾತಿಗಳ ಬಗ್ಗೆ ಮಾತಾಡೋದು ಶೋಭೆ ತರಲ್ಲ. ಎಲ್ಲ ಜಾತಿ, ವರ್ಗಗಳನ್ನು ಒಟ್ಟಿಗೆ ತಗೊಂಡ್ ಹೋಗೋರು ಸಿಎಂ ಆಗ್ತಾರೆ. ಮುನಿರತ್ನ ಜೊತೆಯಲ್ಲಿದ್ದಾಗ ಏನೂ ಆರೋಪ ಮಾಡಲಿಲ್ಲ. ಮುನಿರತ್ನ ಜೊತೆಯಲ್ಲಿ ಇಲ್ಲ ಅಂತ ಇಲ್ಲಸಲ್ಲದ ಆರೋಪ ಮಾಡೋದು ಸರಿಯಲ್ಲ. ಕಾಂಗ್ರೆಸ್ ನಾಯಕರ ಇಂಥ ಹೇಳಿಕೆಗಳು ನೋವು ತಂದಿವೆ ನನಗೆ. ನಾನು ವೋಟರ್ ಅಡಿಯಲ್ಲಿ ಗೌಡ ಅಂತ ಇರೋದನ್ನು ಡಿಲೀಟ್ ಮಾಡಿಸುವಷ್ಟು ನೀಚ ಕೆಲಸ ಮಾಡಲ್ಲ ನಾನು. ಅಂಥ ನೀಚ ಕೃತ್ಯಕ್ಕೆ ಕೈಹಾಕುವ ಸಂಸ್ಕೃತಿ ನನ್ನದಲ್ಲ ಎಂದು ವಾಗ್ದಾಳಿ ನಡೆಸಿದರು.