ಬೆಂಗಳೂರು:ಎಲ್ಲರೂ ಚನ್ನಾಗಿದ್ದೀರಾ ಎಂದು ಕನ್ನದಲ್ಲಿ ಮಾತು ಆರಂಭಿಸಿದ ನಟಿ ಖುಷ್ಬೂ ತಮಿಳಿನಲ್ಲಿ ಆರ್.ಆರ್.ನಗರ ಅಭ್ಯರ್ಥಿ ಮುನಿರತ್ನ ಪರ ಮತ ಯಾಚಿಸಿದರು.
ಆರ್.ಆರ್.ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಪೇಗೌಡ ನಗರ ಆರ್ಚ್ನಿಂದ ಲಗ್ಗೆರೆ ಕ್ವಾಟ್ರಸ್ ಮುಖಾಂತರ ರೋಡ್ ಶೋ ನಡೆಸಿದರು. ಗಲ್ಲಿ ಗಲ್ಲಿಗಳಲ್ಲೂ ಅಬ್ಬರದ ಪ್ರಚಾರ ನಡೆಸಿದರು. ನಂತರ ಸ್ಲಂ ನಿವಾಸಿಗಳು, ತಮಿಳು ಸಮುದಾಯದ ಜನರು ಹೆಚ್ಚಿರುವ ಕೂಲಿ ನಗರದಲ್ಲಿ ಖುಷ್ಬೂ ತೆರದ ವಾಹನದಲ್ಲಿ ಭಾಷಣ ಮಾಡಿದರು. ವಣಕ್ಕುಂ ಎನ್ನುತ್ತಾ ಎಲ್ಲರೂ ಚೆನ್ನಾಗಿದೀರಾ ಅಂತ ಕನ್ನಡದಲ್ಲಿ ಕೇಳಿದ ಖುಷ್ಬೂ ಕನ್ನಡ ಅರ್ಥ ಆಗುತ್ತದೆ ಆದರೆ ಕನ್ನಡ ಮಾತಾಡಲು ಸ್ವಲ್ಪ ಸಮಯ ಹಿಡಿಯುತ್ತೆ ಅಷ್ಟು ಸಮಯ ಇಲ್ಲ ಎಂದು ಕನ್ನಡದಲ್ಲೇ ಹೇಳುತ್ತಾ ತಮಿಳಿನಲ್ಲಿ ಭಾಷಣ ಮಾಡಿದರು.
ಈ ಉಪ ಚುನಾವಣೆ ಅಭಿವೃದ್ಧಿ ಪರ ಚುನಾವಣೆಯಾಗಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನರಿಗೆ ಮತ ಹಾಕಿ ಗೆಲ್ಲಿಸಿ. ನಿಮಗೆ ನನ್ನ ಮೇಲೆ ದೊಡ್ಡ ಅಭಿಮಾನ ಇದೆ. ಆ ಅಭಿಮಾನಕ್ಕಾಗಿ ನಾನಿಲ್ಲಿ ಮುನಿರತ್ನ ಪರ ಮತಯಾಚನೆಗೆ ಬಂದಿದ್ದೇನೆ. ಮುನಿರತ್ನ ಉತ್ತಮ ಶಾಸಕರಾಗಿದ್ದವರು, ಅವರು ಗೆದ್ದರೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವ ಕೊರತೆಯನ್ನೂ ಮಾಡಲ್ಲ ಹಾಗಾಗಿ ಅವರಿಗೆ ಬೆಂಬಲ ನೀಡಿ ಎಂದು ಮತ ಯಾಚಿಸಿದರು.
ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ನಟಿ ಖುಷ್ಬೂ ಪ್ರಚಾರ ಶಾಸಕರಾಗಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳೇ ಅವರನ್ನು ಕೈಹಿಡಿಯಲಿದೆ. ಮುನಿರತ್ನರಿಗೆ ದೊಡ್ಡ ಮಟ್ಟದಲ್ಲಿ ಜಯಭೇರಿ ಸಿಗುವ ವಿಶ್ವಾಸ ಇದೆ ಎಂದರು.
ಅಭ್ಯರ್ಥಿ ಮುನಿರತ್ನ ಮಾತನಾಡಿ, ಖುಷ್ಬೂ ಅವರು ನನ್ನ ಪರ ಮತಯಾಚನೆಗೆ ಬಂದಿದ್ದಾರೆ. ನಿಮ್ಮ ಪರವಾಗಿ ಖುಷ್ಬೂ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಖುಷ್ಬೂ ನನಗೆ ಒಳ್ಳೆಯದನ್ನು ಬಯಸಿಕೊಂಡು ಬರುತ್ತಿರುವ ಅಮ್ಮ. 22 ವರ್ಷಗಳಿಂದ ಖುಷ್ಬೂ ಅಮ್ಮನವರ ಜೊತೆ ಬಾಂಧವ್ಯ ಇದೆ. ನನ್ನ ಮೊದಲ ಸಿನಿಮಾ ಆಂಟಿ ಪ್ರೀತ್ಸೆಗೆ ಅವರು ನಾಯಕಿಯಾಗಿದ್ದರು. ಆಗಿನಿಂದ ಇಲ್ಲಿಯವರೆಗೂ ಅವರ ಜೊತೆ ಉತ್ತಮ ಒಡನಾಟವಿದೆ. ನಿಮ್ಮ ಮುನಿರತ್ನರನ್ನು ಮೂರನೇ ಬಾರಿಗೆ ಗೆಲ್ಲಿಸುತ್ತೀರಿ ಎನ್ನುವ ವಿಶ್ವಾಸ ಇದೆ ಎಂದರು.
ವಲಸಿಗರ ಪ್ರಚಾರ:
ಇಂದಿನ ಚುನಾವಣಾ ಪ್ರಚಾರದ ವಿಶೇಷ ಅಂದರೆ ಪಕ್ಷಾಂತರಿಗಳೇ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಮುನಿರತ್ನ ನಿಂತಿದ್ದು, ಅವರ ಪರವಾಗಿ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರಿವ ನಟಿ ಖುಷ್ಬೂ ಹಾಗು ಪಕ್ಷೇತರ ಶಾಸಕರಾಗಿದ್ದ ಆರ್.ಶಂಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದು ಈ ಮೂವರೇ ಇಂದಿನ ಪ್ರಚಾರ ಕಾರ್ಯ ನಡೆಸಿದರು.