ಬೆಂಗಳೂರು:ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದಗೌಡ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಂಪರ್ಕಿತರು ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ. ಈ ನಡುವೆ ಮುನಿರತ್ನ ಸಚಿವರನ್ನು ಭೇಟಿ ಮಾಡಿ ಆತಂಕಕ್ಕೆ ಸಿಲುಕಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಯಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಕೋವಿಡ್-19ನ ಪ್ರಾಥಮಿಕ ಹಂತದ ರೋಗಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ವಯಂ ಕೊರೊನಾ ತಪಾಸಣೆಗೆ ಒಳಗಾಗಿದ್ದು, ಇಂದು ಪಾಸಿಟಿವ್ ಎಂದು ವರದಿ ಬಂದಿದೆ. ಹಾಗಾಗಿ, ನಾನು ಸ್ವಯಂ ಐಸೋಲೇಷನ್ಗೆ ಒಳಗಾಗಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದಿದ್ದವರು ಮುನ್ನೆಚ್ಚರಿಕೆ ವಹಿಸಿ ಹಾಗೂ ಕೊರೊನಾ ಮಾರ್ಗಸೂಚಿ ಪಾಲನೆ ಮಾಡಿ ಸುರಕ್ಷಿತವಾಗಿರಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಆತಂಕದಲ್ಲಿ ಮುನಿರತ್ನ:
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಚುನಾಯಿತನಾದ ಹಿನ್ನೆಲೆ ಡಿ.ವಿ.ಸದಾನಂದಗೌಡರನ್ನು ಇಂದು ಭೇಟಿಯಾಗಿ ನೂತನ ಶಾಸಕ ಮುನಿರತ್ನ ಅಭಿನಂದಿಸಿದ್ದರು. ಇದೀಗ ಸದಾನಂದಗೌಡರ ಕೊರೊನಾ ವರದಿ ಪಾಸಿಟಿವ್ ಬಂದಿರುವ ಹಿನ್ನೆಲೆ ಮುನಿರತ್ನ ಆತಂಕಕ್ಕೆ ಸಿಲುಕಿದ್ದಾರೆ.
ಸ್ಥಳೀಯ ಮುಖಂಡರೊಂದಿಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಚನ್ನೇನಹಳ್ಳಿಗರಿಗೂ ಆತಂಕ:
ಸಂಸದರ ಆದರ್ಶ ಗ್ರಾಮ ಚನ್ನೇನಹಳ್ಳಿಯಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಕೇಂದ್ರ ಸಚಿವ ಸದಾನಂದಗೌಡ ಪರಿಶೀಲಿಸಿದರು. ಕೊರೊನಾ ಮಧ್ಯೆಯೂ ಕಾಮಗಾರಿ ಪ್ರಗತಿ ತೃಪ್ತಿಕರವಾಗಿ ನಡೆದಿದೆ. ಒಳಚರಂಡಿ ಹಾಗೂ ಡ್ರೇನೇಜ್ ಕೆಲಸ ಮುಗಿಸಿದ ನಂತರವಷ್ಟೇ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಿದರು. ಆದರೆ, ಅವರ ಕೊರೊನಾ ವರದಿ ಈಗ ಪಾಸಿಟಿವ್ ಬಂದ ಹಿನ್ನೆಲೆ ಚನ್ನೇನಹಳ್ಳಿಗರು, ಅಧಿಕಾರಿ ವರ್ಗ ಆತಂಕಕ್ಕೆ ಸಿಲುಕಿದೆ.
ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಟ್ವೀಟ್ ಸಚಿವರ ನಡೆಗೆ ಅಸಮಧಾನ:
ಕೊರೊನಾ ರೋಗ ಲಕ್ಷಣ ಪ್ರಾಥಮಿಕ ಹಂತದಲ್ಲಿ ಕಾಣಿಸಿಕೊಂಡ ಅನುಮಾನದಿಂದ ಕೊರೊನಾ ತಪಾಸಣೆ ಮಾಡಿಸಿಕೊಂಡಿದ್ದ ಕೇಂದ್ರ ಸಚಿವ ಸದಾನಂದಗೌಡ, ವರದಿ ಬರುವವರೆಗೂ ಸ್ವಯಂ ಕ್ವಾರಂಟೈನ್ ಆಗುವ ಬದಲು ಪ್ರಗತಿ ಪರಿಶೀಲನೆ, ಅತಿಥಿಗಳ ಭೇಟಿಯಂತಹ ಕೆಲಸ ಮಾಡಿರುವುದು ಇದೀಗ ಜನತೆಯಲ್ಲಿ ಅಸಮಧಾನ ಮೂಡಿಸಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಇಂತಹ ನಿರ್ಲಕ್ಷ್ಯ ಎಷ್ಟು ಸರಿ ಎನ್ನುವ ಆಕ್ರೋಶ ಹೊರಹಾಕುತ್ತಿದ್ದಾರೆ.