ಬೆಂಗಳೂರು:ಮೂರು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗಿದ್ದ ಮಹತ್ವದ ವಿಧೇಯಕಗಳನ್ನು ವಿಧಾನಸಭೆಯಲ್ಲಿ ಇಂದು ಅಂಗೀಕರಿಸಲಾಯಿತು.
2021ನೇ ಸಾಲಿನ ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕವನ್ನು ಪೌರಾಡಳಿತ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಎಂಟಿಬಿ ನಾಗರಾಜ್ ಮಂಡಿಸಿದರು. ಶೇ. 5ರಷ್ಟು ತೆರಿಗೆ ರಿಯಾಯಿತಿ ಮಾಡುವ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು. 2020-21ನೇ ಹಣಕಾಸು ವರ್ಷದಲ್ಲಿ ಕೋವಿಡ್-19ನಿಂದ ಆಸ್ತಿ ತೆರಿಗೆ ಪಾವತಿಯ ಕಾಲಮಿತಿಯನ್ನು ವಿಸ್ತರಿಸಲು ಈ ವಿಧೇಯಕವನ್ನು ಜಾರಿಗೆ ತರಲಾಗುತ್ತಿದೆ. ಈ ತಿದ್ದುಪಡಿ ಅಧಿನಿಯಮದ ಪ್ರಾರಂಭದ ದಿನಾಂಕದಿಂದ(ಏಪ್ರಿಲ್ 1ರಿಂದ) ಒಂದು ತಿಂಗಳ ಒಳಗಾಗಿ ತೆರಿಗೆಯನ್ನು ಪಾವತಿಸಿದ ಸಂದರ್ಭದಲ್ಲಿ ಶೇ. 5ರಷ್ಟು ರಿಯಾಯಿತಿಯನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ನಗರ ಪಾಲಿಕೆಗಳ(ತಿದ್ದುಪಡಿ) ವಿಧೇಯಕ 2021ಕ್ಕೆ ಅಸ್ತು: ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾರ್ಗಸೂಚಿ ದರದ ಅನ್ವಯ ತೆರಿಗೆಯನ್ನು ಹೆಚ್ಚಳ ಮಾಡುವ ಸಂಬಂಧ ಕರ್ನಾಟಕ ನಗರ ಪಾಲಿಕೆಗಳ(ತಿದ್ದುಪಡಿ) ವಿಧೇಯಕ 2021 ಅಂಗೀಕರಿಸಲಾಯಿತು. ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ವಿಧೇಯಕ ಮಂಡಿಸಿ, ವಾಣಿಜ್ಯ ಕಟ್ಟಡಗಳಿಗೆ ತೆರಿಗೆಗೆ ಗುರಿಯಾಗುವಂತಹ ಕಟ್ಟಡದ ಮೂಲ ಬೆಲೆಯ ಶೇ. 0.5ಕ್ಕಿಂತ ಕಡಿಮೆಯಿಲ್ಲದ ಶೇ. 3ಕ್ಕಿಂತ ಹೆಚ್ಚಿಲ್ಲದ ತೆರಿಗೆ ವಿಧಿಸುವುದು. ವಾಸದ ಕಟ್ಟಡ ಮತ್ತು ವಾಣಿಜ್ಯೇತರ ಕಟ್ಟಡಗಳಿಗೆ ಸಂಬಂಧಿಸಿದಂತೆ ತೆರಿಗೆಗೆ ಗುರಿಯಾಗುವಂತಹ ಕಟ್ಟಡದ ಮೂಲ ಬೆಲೆಯ ಶೇ. 0.3ಕ್ಕಿಂತ ಹೆಚ್ಚಿಲ್ಲದ ಮತ್ತು ಶೇ. 1ಕ್ಕಿಂತ ಕಡಿಮೆ ಇಲ್ಲದ ತೆರಿಗೆ ವಿಧಿಸುವುದಾಗಿದೆ. ಒಂದು ಸಾವಿರ ಚದರ ಮೀಟರಿಗಿಂತ ಹೆಚ್ಚಿಲ್ಲದ ಅಳತೆಯ ಖಾಲಿ ಭೂಮಿಯಿದ್ದಲ್ಲಿ ತೆರಿಗೆಗೆ ಗುರಿಯಾಗತಕ್ಕ ಭೂಮಿಯ ಮೂಲ ಬೆಲೆಯ ಶೇ. 0.1ಕ್ಕಿಂತ ಕಡಿಮೆಯಿಲ್ಲದ ಶೇ. 0.5ಕ್ಕಿಂತ ಹೆಚ್ಚಿಲ್ಲದಂತೆ ತೆರಿಗೆ ನಿಗದಿಪಡಿಸಲಾಗುವುದು. ನಾಲ್ಕು ಸಾವಿರ ಚದರ ಮೀಟರಿಗಿಂತ ಹೆಚ್ಚಿನ ಅಳತೆಯ ಖಾಲಿ ಭೂಮಿಗೆ ಶೇ. 0.01ಕ್ಕಿಂತ ಹೆಚ್ಚಿಲ್ಲದಂತೆ ಶೇಕಡವಾರು ಮುನ್ಸಿಪಲ್ ಕೌನ್ಸಿಲ್ ಸ್ವತ್ತು ನಿಗದಿಪಡಿಸಬೇಕು ಎಂದರು.
ಕರ್ನಾಟಕ ಪುರಸಭೆಗಳ (ಎರಡನೇ ತಿದ್ದುಪಡಿ) ವಿಧೇಯಕ ಅಂಗೀಕಾರ: ಪುರಸಭೆಗಳ ವ್ಯಾಪ್ತಿಯಲ್ಲಿ ತೆರಿಗೆಯನ್ನು ಹೆಚ್ಚಿಸುವ ವಿಧೇಯಕ ಇದಾಗಿದೆ. ಅಸ್ವಿತ್ವದಲ್ಲಿರುವ ಸ್ವತ್ತು ತೆರಿಗೆ ವ್ಯವಸ್ಥೆಯನ್ನು ಪರಿಷ್ಕರಿಸಲು ಹಾಗೂ ಸರಳೀಕೃತ ಸ್ವತ್ತು ತೆರಿಗೆ ಮೂಲಾಧಾರವನ್ನು ಉಪಬಂಧಿಸಲು, 2020-21ನೇ ವರ್ಷಕ್ಕಾಗಿ ನಿವ್ವಳ ರಾಜ್ಯ ದೇಶೀಯ ಉತ್ಪನ್ನದ(ಜಿಎಸ್‌ಡಿಪಿ) ಶೇ. 0.25 ಹೆಚ್ಚುವರಿ ಸಾಲ ಪಡೆಯುವ ಮಿತಿಗೆ ಅರ್ಹರಾಗುವಂತೆ ರಾಜ್ಯ ಸರ್ಕಾರವನ್ನು ಸಶಕ್ತಗೊಳಿಸಲು ಈ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ವಿಧೇಯಕದ ಬಗ್ಗೆ ಉತ್ತರಿಸಲು ತಡಬಡಾಯಿಸಿದ ಎಂಟಿಬಿ: ಈ ವೇಳೆ ವಿಧೇಯಕದ ಬಗ್ಗೆ ಪ್ರತಿಪಕ್ಷದ ಸದಸ್ಯರು ವಿವರಣೆ ಕೇಳಿದರು. ಈ ವೇಳೆ ವಿವರಣೆ ನೀಡಲು ಸಚಿವ ಎಂಟಿಬಿ ತಡಬಡಾಯಿಸಿದರು. ಬಳಿಕ ಸ್ಪೀಕರ್ ಮಧ್ಯಪ್ರವೇಶಿಸಿ ಮಾಧುಸ್ವಾಮಿ ಮತ್ತು ಸಚಿವ ಜಗದೀಶ್ ಶೆಟ್ಟರ್ಗೆ ವಿವರಣೆ ನೀಡುವಂತೆ ಸೂಚಿಸಿದರು. ಸ್ಪೀಕರ್ ಸೂಚನೆಯಂತೆ ಸಚಿವ ಶೆಟ್ಟರ್, ಬಿಲ್ ಬಗ್ಗೆ ವಿವರಣೆ ನೀಡಿದರು. ಈ ವೇಳೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೆರಿಗೆ ಹೆಚ್ಚಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದರು.