ಬೆಂಗಳೂರು:ಹೈಕೋರ್ಟ್ ಆವರಣದಲ್ಲಿ ಆಡಳಿತ ವ್ಯವಹಾರಗಳ ನಿರ್ವಹಣೆಗಾಗಿ ಹತ್ತು ಮಹಡಿಯ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಇರುವುದಾಗಿ ಹೈಕೋರ್ಟ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಹೈಕೋರ್ಟ್ ಕಟ್ಟಡದ ನೆಲಮಹಡಿಯಲ್ಲಿ ಇರುವ ಕಚೇರಿಗಳನ್ನು ಸ್ಥಳಾಂತರಿಸಲು ಸೂಕ್ತ ಆದೇಶ ಹೊರಡಿಸುವಂತೆ ಕೋರಿ ವಕೀಲ ಎಲ್.ರಮೇಶ್ ನಾಯಕ್ ಮತ್ತು ಹೈಕೋರ್ಟ್ ಕಟ್ಟಡ ಸಂಕೀರ್ಣಕ್ಕೆ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಶರಣ ದೇಸಾಯಿ ಎಂಬವರು ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್) ಸಲ್ಲಿಕೆಯಾಗಿದ್ದವು.
ಈ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠಕ್ಕೆ ಸರ್ಕಾರ ಮಾಹಿತಿ ನೀಡಿತು. ವಿಚಾರಣೆ ವೇಳೆ ಹೈಕೋರ್ಟ್ ಆಡಳಿತ ವಿಭಾಗದ ಪರ ಹಾಜರಾದ ಹಿರಿಯ ವಕೀಲ ನಾಗಾನಂದ, ಹೈಕೋರ್ಟ್ ವಿಸ್ತರಣೆಗೆ ಸ್ಥಳಾವಕಾಶ ಒದಗಿಸುವ ಸಂಬಂಧ ಮೂರು ಪ್ರಸ್ತಾವನೆಗಳನ್ನು ಸರ್ಕಾರ ಸಲ್ಲಿಸಿದೆ. ಅವುಗಳನ್ನು ಹೈಕೋರ್ಟ್ ಕಟ್ಟಡ ಸಮಿತಿ ಪರಿಶೀಲನೆ ನಡೆಸಲಿದೆ. ಹೈಕೋರ್ಟ್ ಆ.14ರಂದು ಹೊರಡಿಸಿದ ಆದೇಶದಂತೆ ಸರ್ಕಾರವು ಮೂರು ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಆ ಮೂರು ಪ್ರಸ್ತಾವನೆಗಳನ್ನು ಹೈಕೋರ್ಟ್ ಕಟ್ಟಡ ಸಮಿತಿ ಪರಿಶೀಲಿಸಿ, ತನ್ನ ಅಭಿಪ್ರಾಯಗಳೊಂದಿಗೆ ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕಿದೆ. ನಂತರ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ತೆಗೆದುಕೊಂಡು, ಅದನ್ನು ನ್ಯಾಯಾಲಯದ (ಹೈಕೋರ್ಟ್) ಮುಂದಿಡಬೇಕಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.