ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ: ಮುಖ್ಯಮಂತ್ರಿ ಚಂದ್ರು ಆರೋಪ

ಯೋಜನೆಗಳಲ್ಲಿ ಯಾವುದೇ ಕಮಿಷನ್ ಬಾರದೇ ಅಧಿಕಾರಿಗಳ ವರ್ಗಾವಣೆ ದಂಧೆ ಹಣ ವಸೂಲಿಗೆ ಮಾರ್ಗವಾಗಿದೆ ಎಂದು ಆಮ್​ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆರೋಪಿಸಿದ್ದಾರೆ.

mukyamant-chandru-reaction-on-congress-government
ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ: ಮುಖ್ಯಮಂತ್ರಿ ಚಂದ್ರು ಆರೋಪ

By

Published : Jul 26, 2023, 7:46 PM IST

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳುಗಳಲ್ಲಿಯೇ ಎಗ್ಗಿಲ್ಲದ ವರ್ಗಾವಣೆ ದಂಧೆ ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ಸರ್ಕಾರದ ಮಂತ್ರಿ ಮಹೋದಯಗಳ ವರ್ಗಾವಣೆ ದಂಧೆ ನಿಜ ಎಂಬುದು ಅವರದೇ ಪಕ್ಷದ ಹಿರಿಯ ಶಾಸಕ ಬಿ. ಆರ್. ಪಾಟೀಲರ ಪತ್ರದಿಂದ ಸಾಬೀತಾಗುತ್ತಿದೆ. ಸರ್ಕಾರವು ವರ್ಗಾವಣೆ ದಂಧೆಯಲ್ಲಿ ಮುಳುಗಿರುವ ಅನುಮಾನ ಇದೆ ಎಂದು ಆಮ್​ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಕಾಂಗ್ರೆಸ್ ನವರಿಗೆ ಕೇವಲ ಆಮ್ ಆದ್ಮಿ ಪಕ್ಷದ ಕಾರ್ಯಕ್ರಮಗಳನ್ನು ಕಳ್ಳತನ ಮಾಡುವುದು ಗೊತ್ತಿದೆಯೇ ಹೊರತು, ಭ್ರಷ್ಟಾಚಾರ ಮುಕ್ತ ಸರ್ಕಾರ ಇದ್ದಲ್ಲಿ ಮಾತ್ರ ಈ ರೀತಿಯ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಬಹುದು ಮತ್ತು ದೆಹಲಿ ಮಾದರಿಯ ಸಾಲ ಮುಕ್ತ ಬಜೆಟ್​ಗಳನ್ನು ಘೋಷಿಸಬಹುದು ಎಂಬುದು ಗೊತ್ತಿಲ್ಲ. ಚುನಾವಣಾ ಅಕ್ರಮಗಳಿಗಾಗಿ ಖರ್ಚು ಮಾಡಿರುವ ಹಣವನ್ನು ಕೂಡಲೇ ಹೇಗಾದರೂ ಮಾಡಿ ವಸೂಲಿ ಮಾಡಿಕೊಳ್ಳಬೇಕು ಎಂಬ ದಾವಂತ ಕಾಂಗ್ರೆಸ್ ಶಾಸಕರುಗಳಲ್ಲಿ ಇರುವುದು ಬಿ. ಆರ್. ಪಾಟೀಲರ ಪತ್ರದಿಂದ ಸ್ಪಷ್ಟವಾಗುತ್ತಿದೆ ಎಂಬ ಅನುಮಾನ ರಾಜ್ಯದ ಜನತೆಯಲ್ಲಿ ಹಾಗೂ ನಮ್ಮಲ್ಲೂ ಕಾಡುತ್ತಿದೆ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸರ್ಕಾರದಲ್ಲಿ ಯೋಜನೆಗಳಿಗಾಗಿ ಯಾವುದೇ ಹಣವಿಲ್ಲ. ಶಾಸಕರುಗಳು ಅನುದಾನಕ್ಕಾಗಿ ಒತ್ತಾಯ ಮಾಡಬಾರದು ಎಂದು ಹೇಳುತ್ತಾರೆ. ಯೋಜನೆಗಳಲ್ಲಿ ಯಾವುದೇ ಕಮಿಷನ್ ಬಾರದ ಈ ಪರಿಸ್ಥಿತಿಯಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆಯೇ ಇವರಿಗೆ ಗಟ್ಟಿ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ವಸೂಲಿ ಮಾಡುವುದೊಂದೇ ಈಗಿರುವ ಏಕೈಕ ಮಾರ್ಗ. ಇದರಿಂದಾಗಿ ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರಗಳಿಂದಾಗಿ ಪರಿತಪಿಸುವುದು ಗ್ಯಾರಂಟಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದುವರೆದು ಜೆಡಿಎಸ್ ಪಕ್ಷದಲ್ಲಿ ಮಾಜಿ ಪ್ರಧಾನಿ ಗೌಡರು ಯಾರೊಂದಿಗೂ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರೆ ತದ್ವಿರುದ್ಧವಾಗಿ ಅವರ ಮಗ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಹೊಂದಾಣಿಕೆಯ ಮಾತುಕತೆ ನಡೆಯುತ್ತಿದೆ ಎಂಬ ಹೇಳಿಕೆ ನೀಡುತ್ತಿರುವುದು ದ್ವಂದ್ವದಿಂದ ಕೂಡಿದೆ. ಇಬ್ಬರು ಒಟ್ಟಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಯಾರೊಂದಿಗೆ ಕೈಜೋಡಿಸುತ್ತೇವೆ ಎಂಬುದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಲಿ ಎಂದು ಮುಖ್ಯಮಂತ್ರಿ ಚಂದ್ರು ಸವಾಲು ಹಾಕಿದ್ದಾರೆ.

ಇದನ್ನೂ ಓದಿ:ಬಿಜೆಪಿ- ಜೆಡಿಎಸ್​ ಒಂದಾದರೆ ನಮಗೆ ಯಾವುದೇ ಭಯವಿಲ್ಲ: ವೀರಪ್ಪ ಮೊಯ್ಲಿ

ನಕಲಿ ಪತ್ರದ ಕುರಿತು ಎಸ್ಪಿಗೆ ದೂರು ನೀಡಿದ ಶಾಸಕ ಬಿ.ಆರ್‌.ಪಾಟೀಲ್:ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಸಚಿವರ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಮಂಗಳವಾರ ಸಂಚಲನ ಸೃಷ್ಟಿಸಿತ್ತು. ಈ ಕುರಿತು ಬಿ.ಆರ್.ಪಾಟೀಲ್ ಪೊಲೀಸರಿಗೆ ದೂರು ನೀಡಿದ್ದರು. ಕಳೆದ ಬಾರಿ ನಾನು ಶಾಸಕನಾಗಿದ್ದ ಸಂದರ್ಭದ ಲೆಟರ್‌ಹೆಡ್ ಮಾದರಿ ಬಳಸಿಕೊಂಡು ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ. ನಕಲಿ ಲೆಟರ್ ಸೃಷ್ಟಿಸಿ ಅನಗತ್ಯ ಗೊಂದಲ ಉಂಟುಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಲಬುರಗಿ ಎಸ್ಪಿ ಈಶಾ ಪಂತ್ ಅವರಿಗೆ ದೂರು ಸಲ್ಲಿಸಿದ್ದರು. ಇದೇ ವೇಳೆ, ಇದು ಸಚಿವ ಪ್ರಿಯಾಂಕ್ ಖರ್ಗೆ ಮತ್ತು ನನ್ನ ನಡುವೆ ದ್ವೇಷ ಉಂಟು ಮಾಡುವ ಕೃತ್ಯ ಎಂದು ತಿಳಿಸಿದ್ದರು.

ABOUT THE AUTHOR

...view details