ಬೆಂಗಳೂರು: ರಾಜ್ಯಸಭೆ ಟಿಕೆಟ್ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಹಿರಿಯ ಚಿತ್ರನಟ, ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಇಂದು 'ಆಮ್ ಆದ್ಮಿ' ಪಕ್ಷ ಸೇರ್ಪಡೆಯಾಗಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಪ್ನ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರಿದ್ದಾರೆ.
ಮುಖ್ಯಮಂತ್ರಿ ಚಂದ್ರು ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿರುವುದಕ್ಕೆ ಸಂಬಂಧಿಸಿದಂತೆ ಎಎಪಿ ಬೆಂಗಳೂರು ಘಟಕ ಟ್ವೀಟ್ ಮಾಡಿದ್ದು, ಕರ್ನಾಟಕದ ಸಾರ್ವಕಾಲಿಕ ಮುಖ್ಯಮಂತ್ರಿ ಈಗ ಆಮ್ ಆದ್ಮಿ ಆಗಿದ್ದಾರೆ. ನಮ್ಮ ಕುಟುಂಬಕ್ಕೆ ಸ್ವಾಗತ ಮುಖ್ಯಮಂತ್ರಿಗಳೇ! ಎಂದು ಆಪ್ ಬರೆದುಕೊಂಡಿದೆ. ಪಕ್ಷ ಸೇರ್ಪಡೆ ವೇಳೆ ಎಎಪಿ ಪಕ್ಷದ ಸಿದ್ಧಾಂತಗಳನ್ನ ಮೆಚ್ಚಿ ತಾವು ಸೇರ್ಪಡೆಯಾಗುತ್ತಿರುವುದಾಗಿ ಚಂದ್ರು ತಿಳಿಸಿದ್ದಾರೆ. ಈ ವೇಳೆ ಮಾಜಿ ಐಪಿಎಸ್ ಅಧಿಕಾರಿ, ಆಪ್ ಮುಖಂಡ ಭಾಸ್ಕರ್ ರಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ತೊರೆದಿದ್ದ ಮುಖ್ಯಮಂತ್ರಿ ಚಂದ್ರು ಅವರನ್ನು ಆಪ್ನ ಪೃಥ್ವಿ ರೆಡ್ಡಿ ಮತ್ತು ಇತರ ಪ್ರಮುಖರು ಭೇಟಿ ಮಾಡಿ ಪಕ್ಷ ಸೇರಲು ಮನವೊಲಿಸಿದ್ದರು. ಇದಕ್ಕೆ ಸ್ಪಂದಿಸಿ ಪಕ್ಷ ಸೇರುವ ಭರವಸೆ ನೀಡಿದ್ದರು.