ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಚಂದ್ರು ಸಂತಸ ಬೆಂಗಳೂರು: ವಿಪಕ್ಷಗಳ ಮೈತ್ರಿ ಕೂಟ 'ಇಂಡಿಯಾ' ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಪ್ರಸ್ತಾಪಿಸಿದ್ದಕ್ಕೆ ಆಮ್ ಆದ್ಮಿ ಪಕ್ಷದ ಕರ್ನಾಟಕ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಚಂದ್ರು ನೇರವಾಗಿ ಖರ್ಗೆ ಅವರ ಜೊತೆಗೆ ಬುಧವಾರ ದೂರವಾಣಿಯಲ್ಲಿ ಮಾತನಾಡಿ ಶುಭಾಶಯಗಳು ತಿಳಿಸಿ ಹಾಗೂ ಖುದ್ದಾಗಿ ಪತ್ರವನ್ನು ಬರೆದಿರುವ ಅವರು, ಕೇಜ್ರಿವಾಲ್ ಅವರು ಖರ್ಗೆ ಹೆಸರನ್ನು ಪ್ರಸ್ತಾಪ ಮಾಡಿರುವುದು ನನಗೆ ವೈಯಕ್ತಿಕವಾಗಿ ಸಂತೋಷ ತಂದಿದೆ ಎಂದಿದ್ದಾರೆ. ವಿಭಜಕ ರಾಜಕಾರಣ ಉತ್ತುಂಗದಲ್ಲಿದ್ದು, ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ. ನಮ್ಮ ದೇಶ ರಾಜಕೀಯ ಸಂಕಷ್ಟವನ್ನು ಎದುರಿಸುತ್ತಿದ್ದು, ಈ ಕಾಲದಲ್ಲಿ ಪ್ರಜಾಪ್ರಭುತ್ವ ಕೂಡ ಅಪಾಯದಲ್ಲಿದೆ.
ಇಂತಹ ಸಂದರ್ಭದಲ್ಲಿ ಅಪಾರ ರಾಜಕೀಯ ಅನುಭವ ಹೊಂದಿರುವ, ರಾಜಕೀಯ ಮುತ್ಸದ್ದಿ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಪ್ರಸ್ತಾಪಿಸಿರುವುದು ಸಂತಸ ತಂದಿದೆ. 5 ದಶಕಗಳ ರಾಜಕೀಯ ಅನುಭವ ಹೊಂದಿರುವ ಖರ್ಗೆಯವರು ಎಲ್ಲ ಸಮಾನ ಮನಸ್ಕ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಇಂಡಿಯಾ ಒಕ್ಕೂಟವನ್ನು ಗೆಲ್ಲಿಸುವ ನಂಬಿಕೆ ಇದೆ ಎಂದರು.
ದೇಶದ ಬಹುತ್ವ ಮತ್ತು ವೈವಿಧ್ಯತೆಗೆ ಧಕ್ಕೆ ಉಂಟಾಗುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ನಾಯಕರೊಬ್ಬರು ದೇಶದ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿಯಾಗಿದೆ. ಖರ್ಗೆ ಅವರಿಗೆ ರಾಜ್ಯದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ: ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೆಸರು ಕೇಳಿ ಬಂದಿರುವ ವಿಚಾರವಾಗಿ ಅವರ ಪುತ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದರು. ಕನ್ನಡಿಗರೊಬ್ಬರು ಪ್ರಧಾನಿಯಾಗ್ತಾರೆ ಅಂದ್ರೆ ಅದು ಹೆಮ್ಮೆಯ ವಿಚಾರ. ಹಾಗಂತ ಸುಮ್ಮನೆ ಹಗಲುಗನಸು ಕಾಣುವುದಲ್ಲ. ನಾವು ಮೊದಲು ಕಾಂಗ್ರೆಸ್ನಿಂದ 200-250 ಸ್ಥಾನಗಳನ್ನು ಗೆಲ್ಲಬೇಕು. ಮೈತ್ರಿಕೂಟದ ಜೊತೆ ಒಗ್ಗೂಡಿ ಹೆಚ್ಚಿನ ಸ್ಥಾನ ಗೆಲ್ಲಬೇಕು. ಇವೆಲ್ಲವೂ ಮುಗಿದ ಮೇಲೆ ಮುಂದಿನ ಪ್ರಶ್ನೆಗಳು ಎಂದು ಹೇಳಿದ್ದರು.
ಹೆಚ್.ವಿಶ್ವನಾಥ್: ಇಂಡಿಯಾ ಒಕ್ಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದರೆ ಅದಕ್ಕೆ ನನ್ನ ಸಂಪೂರ್ಣ ಸಹಮತವಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ವಿಶ್ವನಾಥ್ ಕೂಡ ಹೇಳಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ಮಲ್ಲಿಕಾರ್ಜುನ ಖರ್ಗೆ ಸಾಮಾನ್ಯ ಕುಟುಂಬದಿಂದ ಬಂದವರು. ಎಲ್ಲ ರೀತಿಯ ಆಡಳಿತ ಅನುಭವ ಇರುವವರು. ದೇವೇಗೌಡರ ನಂತರ ರಾಜ್ಯದಿಂದ ಇನ್ನೊಬ್ಬರು ಪ್ರಧಾನಿ ಆಗಲಿ ಎಂಬುದು ನನ್ನ ಆಸೆ ಎಂದು ತಿಳಿಸಿದ್ದರು.
ಇದನ್ನೂ ಓದಿ:'141 ಸಂಸದರ ಅಮಾನತುಗೊಳಿಸಿ ಪ್ರಜಾಪ್ರಭುತ್ವದ ಕಗ್ಗೊಲೆ'