ಬೆಂಗಳೂರು:ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹಂಚರಹಳ್ಳಿಯಲ್ಲಿ ಕುಡಿದ ಅಮಲಿನಲ್ಲಿ ಕೊಲೆಯೊಂದು ನಡೆದಿದೆ.
ಕುಡಿದ ನಶೆಯಲ್ಲಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯ
ಮದ್ಯದ ನಶೆಯಲ್ಲಿ ಯುವಕರು ಹೊಡೆದಾಡಿಕೊಂಡಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಹಂಚರಹಳ್ಳಿಯ ನಿವಾಸಿ ವಿನಯ್ ಕೊಲೆಯಾದ ವ್ಯಕ್ತಿ. ನಿನ್ನೆ ರಾತ್ರಿ ಕುಡಿದ ಅಮಲಿನಲ್ಲಿ ಹಂಚರಹಳ್ಳಿ ಚರ್ಚ್ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ದೇಹದ ನಾನಾ ಕಡೆ ಕೊಚ್ಚಿರುವ ಕಾರಣ ಅತೀವ ರಕ್ತಸ್ರಾವದಿಂದ ವಿನಯ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅದೇ ಊರಿನ ರೌಡಿ ಶೀಟರ್ ಪ್ರಶಾಂತ್, ಮಧು, ಕಟ್ಟುಗೊಲ್ಲಹಳ್ಳಿಯ ರೌಡಿ ಶೀಟರ್ ರಾಜ್ ಕುಮಾರ್ ಎಂಬುವವರಿಂದ ಈ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆವಲಹಳ್ಳಿ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮದ್ಯಮಾರಾಟಕ್ಕೆ ಅವಕಾಶ ನೀಡಿದ ಮೊದಲ ದಿನವೇ ಸಣ್ಣದಾಗಿ ಗಲಾಟೆ ನಡೆದಿತ್ತು. ಆದರೆ, ನಿನ್ನೆ ಕಂಠ ಪೂರ್ತಿ ಕುಡಿದ ನಂತರ ಜಗಳ ಮಾಡಿ, ಕೊಲೆಯಲ್ಲಿ ಅಂತ್ಯ ಕಂಡಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಈಸ್ಟ್ ಪಾಯಿಂಟ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.